ಸಮಗ್ರ ನ್ಯೂಸ್: ಧರ್ಮಸ್ಥಳದ ಸುತ್ತಮುತ್ತಲು ಸಂಭವಿಸಿರುವ ಎನ್ನಲಾದ ಸಾವುಗಳ ಆರೋಪಗಳಿಗೆ ಸಂಬಂಧಿಸಿ ಕೂಲಂಕಷ ತನಿಖೆಗೆ ಎಸ್ಐಟಿ ರಚನೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹಲವು ಹೆಣಗಳನ್ನು ಹೂತು ಹಾಕಿರುವುದಾಗಿ ಸಾಕ್ಷಿ ದೂರುದಾರನೋರ್ವ ನೀಡಿರುವ ಹೇಳಿಕೆಗಳ ಆಧಾರದಲ್ಲಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಇದಲ್ಲದೇ ಕಳೆದ 20 ವರ್ಷಗಳ ಈ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ನಾಪತ್ತೆ, ಕೊಲೆ, ಅಸಜಹ ಸಾವು, ಅತ್ಯಾಚಾರ ಪ್ರಕರಣಗಳ ಕುರಿತಂತೆ ವರದಿ ನೀಡುವಂತೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಒಂದು ವಾರದ ಗಡುವನ್ನು ಮಹಿಳಾ ಆಯೋಗವು ಪತ್ರದ ಮೂಲಕ ನೀಡಿದೆ.
ಇತ್ತೀಚೆಗೆ ಮಾಜಿ ಪೌರಕಾರ್ಮಿಕ ಎನ್ನಲಾದ ಓರ್ವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ದಶಕಗಳ ಹಿಂದೆ ಅನೇಕ ಕೊಲೆಗಳನ್ನು ಮಾಡಿದವರು ನನ್ನನ್ನು ಬಲಿಪಶು ಮಾಡಿದ್ದಾರೆ. ಒತ್ತಾಯಪೂರ್ವಕವಾಗಿ ಮೃತದೇಹಗಳನ್ನು ಹೂತು ಹಾಕುವಂತೆ ಮಾಡಿದ್ದಾರೆ. ಈ ಆರೋಪಿಗಳು ಧರ್ಮಸ್ಥಳದ ದೇವಸ್ಥಾನ ಆಡಳಿತ ಮಂಡಳಿಗೆ ಸೇರಿದವರು ಎಂದು ಈ ವ್ಯಕ್ತಿ ಆರೋಪಿಸಿದ್ದಾರೆ.







