ಸಮಗ್ರ ನ್ಯೂಸ್: ಅಬಕಾರಿ ಸುಂಕ ಹಾಗೂ ಪರವಾನಗಿ ಶುಲ್ಕ ಹೆಚ್ಚಳಕ್ಕೆ ಮದ್ಯದಂಗಡಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶುಲ್ಕ ಹೆಚ್ಚಿಸಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯದ ಸುಮಾರು 5000 ಮದ್ಯದಂಗಡಿಗಳ ಮಾಲೀಕರು ಮೇ 21 ರಂದು ಮದ್ಯದಂಗಡಿ ವ್ಯಾಪಾರ, ಡಿಪೊಗಳಿಂದ ಮದ್ಯ ಖರೀದಿ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಮದ್ಯದಂಗಡಿ ಮಾರಾಟ ಸ್ಥಗಿತಕ್ಕೂ ಮುನ್ನ ಅಂದರೆ ಮೇ 20 ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಮೇ 15 ರಂದು ರಾಜ್ಯ ಸರ್ಕಾರವು ದೇಶಿಯ ಮದ್ಯ (ಐಎಂಎಲ್) ಹಾಗೂ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳದ ಜೊತೆಗೆ ಪರವಾನಗಿ ಶುಲ್ಕ ದುಪ್ಪಟ್ಟುಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಿತ್ತು.
ಮದ್ಯದಂಗಡಿ ಪರವಾನಗಿ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಬ್ರೂವರಿ ಮತ್ತು ಡಿಸ್ಟಿಲ್ಲರೀಸ್ ಅಸೋಸಿಯೇಷನ್ ಪದಾಧಿಕಾರಿಗಳು ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಮೇ 21 ರಂದು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ (ಕೆಎಸ್‌ಬಿಸಿಎಲ್) ಡಿಪೊಗಳಿಂದ ಮದ್ಯ ಖರೀದಿ ನಿಲ್ಲಿಸಲಿದ್ದಾರೆ. ರಾಜ್ಯದಲ್ಲಿರುವ 12,000 ಮದ್ಯದಂಗಡಿಗಳ ಪೈಕಿ 5,000ಕ್ಕೂ ಹೆಚ್ಚು ಮದ್ಯದಂಗಡಿಗಳು ಅಂದು ವ್ಯಾಪಾರ ಸ್ಥಗಿತಗೊಳಿಸಲಿವೆ.