ಮುಸ್ಲಿಂಮರ ಬಗ್ಗೆ ಅವಹೇಳನಕಾರಿ ಭಾಷಣ| ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ‘ಬ್ಯಾರಿ’ ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಸಿದ ಹಾಗೂ ಧರ್ಮಗಳ ನಡುವೆ ದ್ವೇಷ ಹುಟ್ಟಿಸಲು ಯತ್ನಿಸಿದ ಬಗ್ಗೆ ಶಾಸಕ ಹರೀಶ್‌ ಪೂಂಜ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Ad Widget .

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರ್ತಕ ಇಬ್ರಾಹಿಂ ಎಸ್‌ಬಿ ಅವರು ದೂರು ನೀಡಿದ್ದು ಭಾರತೀಯ ನ್ಯಾಯಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 196 (ಧರ್ಮಗಳ ನಡುವೆ ದ್ವೇಷ ಹುಟ್ಟಿಸುವುದು) ಹಾಗೂ ಸೆಕ್ಷನ್ 353 (2)ರ (ಶಾಂತಿಭಂಗವನ್ನು ಉಂಟುಮಾಡಲು ಉದ್ದೇಶಪೂರ್ವಕವಾಗಿ ಅವಹೇಳನ ಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Ad Widget . Ad Widget .

‘ನಾನು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಭೆಯಲ್ಲಿ ಶನಿವಾರ ಭಾಗವಹಿಸಿದ್ದೆ. ಆ ಸಭೆಯಲ್ಲಿ ಮಾತನಾಡಿದ್ದ ಶಾಸಕ ಹರೀಶ್ ಪೂಂಜ ಅವರು, ‘ಇಲ್ಲಿರುವ ಕಂತ್ರಿ ಬ್ಯಾರಿಗಳು ನಾಲ್ಕು ಟ್ಯೂಬ್‌ಲೈಟ್ ಒಡೆದರೂ ನಾವು ಯಾರೂ ಎದೆಗುಂದಿಲ್ಲ. ದಿನ ಬೆಳಗಾಗುವಾಗ ಕಂತ್ರಿ ಬ್ಯಾರಿಗಳು ಟ್ಯೂಬ್‌ಲೈಟ್ ಒಡೆಯುತ್ತಿದ್ದಾರೆ, ಡೀಸೆಲ್ ಕದಿಯುತ್ತಿದ್ದಾರೆ ಎಂದು ಊರಿನ ಯುವಕರು ಬಂದು ಹೇಳಿದರು. ಯಾರೂ ತಲೆ ಬಿಸಿ ಮಾಡಬೇಡಿ. ಬ್ರಹ್ಮಕಲಶ ಮುಗಿದು ದೃಢಕಲಶ ಆಗುವ ಮುನ್ನ ಇದನ್ನು ಮಾಡಿದ್ದು ಯಾರೆಂದು ಗೊತ್ತಾಗುತ್ತದೆ. ಗೋಪಾಲಕೃಷ್ಣ ದೇವರು ತೋರಿಸಿಕೊಡುತ್ತಾನೆ’ ಎಂದು ಹೇಳಿದ್ದರು.’ ಎಂದು ಇಬ್ರಾಹಿಂ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

‘ಎಲ್ಲರನ್ನು ಸೌಹಾರ್ದಯುತವಾಗಿ ಕೊಂಡೊಯ್ಯಲು ಯತ್ನಿಸುವುದು ನಾವು ಮಾಡುವ ದೊಡ್ಡ ತಪ್ಪು. ಮಸೀದಿಗೆ ಹೋಗಿ ಆಹ್ವಾನ ಪತ್ರ ನೀಡುತ್ತೇವೆ. ಆಹ್ವಾನ ನೀಡಿದ್ದರಿಂದಲೇ ಅವರು ಟ್ಯೂಬ್‌ಲೈಟ್‌ ಒಡೆದದ್ದು. ನಮಗೂ ಅವರಿಗೂ ಸಂಬಂಧವೇ ಇಲ್ಲ. ನಾವು ಯಾವುದನ್ನೂ ಸಮತೋಲನ ಮಾಡಲು ಹೋಗಬಾರದು. ಹಿಂದೂಗಳು ಹಿಂದೂಗಳೇ. ಅದರಲ್ಲಿ ಎರಡು ಮಾತಿಲ್ಲ. ಅಂತಹ ಕಂತ್ರಿ ಬ್ಯಾರಿಗಳಿಗೂ ಗೋಪಾಲಕೃಷ್ಣ ದೇವರು ಟ್ಯೂಬ್ ಲೈಟ್‌ ಒಡೆದದ್ದು ಯಾರು ಎಂಬುದನ್ನು ಗೊತ್ತು ಮಾಡುವಂತೆ ಮಾಡಲಿ’ ಎಂಬುದಾಗಿ ಪೂಂಜ ಹೇಳಿದ್ದರು’ ಎಂದು ಇಬ್ರಾಹಿಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನಾವು ಇತಿಹಾಸವನ್ನು ಮರೆಯಬಾರದು. ಈ ಊರಿನಲ್ಲಿ ಇರುವುದು ಹಿಂದೂಗಳ 150 ಮನೆ. ಇಲ್ಲಿ 1200 ಜನ ಬ್ಯಾರಿಗಳಿದ್ದಾರೆ. ಇನ್ನು ಕೆಲವರ್ಷಗಳಲ್ಲಿ ಮುಸ್ಲಿಮರ ಸಂಖ್ಯೆ 600 ಆಗುವುದಿಲ್ಲ. ಹತ್ತು ವರ್ಷ ಕಳೆದ ಬಳಿಕ ಅವರ ಸಂಖ್ಯೆ 5 ಸಾವಿರ ಆಗುತ್ತದೆ. ಅವರ ಸಂಖ್ಯೆ 5ಸಾವಿರವಲ್ಲ; 10 ಸಾವಿರವಾದರೂ ಇಲ್ಲಿರುವ ಹಿಂದೂ ಸಮಾಜ ಸನಾತನವಾಗಿ ಸಾವಿರ ವರ್ಷ ಗೋಪಾಲಕೃಷ್ಣ ದೇವರನ್ನು ಆರಾಧನೆ ಮಾಡುತ್ತದೆ ಎಂದು ಸಂಕಲ್ಪ ಮಾಡಬೇಕಾದ ದಿನ ಇಂದು’ ಎಂದು ಪೂಂಜ ಹೇಳಿದ್ದರು’ ಎಂದು ಇಬ್ರಾಹಿಂ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಭೆಯಲ್ಲಿ ಹರೀಶ್‌ ಪೂಂಜ ಮಾತನಾಡಿರುವವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ‘ಬ್ಯಾರಿಗಳಲ್ಲಿ ಜಾತಿ ಇಲ್ಲ ಸರ್ಕಾರಿ ಅಂಕಿ ಅಂಶ ಹೇಳುತ್ತದೆ. ಆದರೆ ಅವರಲ್ಲೂ 70ರಿಂದ 74 ಜಾತಿಗಳಿವೆ. ಆದರೆ ನಮಗೆ ಯಾರಿಗೂ ಅವರ ಜಾತಿ ಯಾವುದು ಎಂದು ಗೊತ್ತಿಲ್ಲ. ನಮಗೆ ಉಸ್ಮಾನಕ್ಕ, ಅಬ್ದುಲ್ಲ, ಇಬ್ರಾಹಿಂ ಬ್ಯಾರಿಗಳೆಂದೇ ಅವರು ಎಂದೇ ಗೊತ್ತು. ನಮ್ಮಲ್ಲಿ ಹಾಗಲ್ಲ. ಅವ ಬ್ರಾಹ್ಮಣ, ಇವ ಬಿಲ್ಲವ, ಅವ ಗೌಡ, ಕುಲಾಲ ಎಂದು ಜಾತಿ ಆಧಾರದಲ್ಲಿ ಹಿಂದುಗಳನ್ನು ಒಡೆಯುವ ಕೆಲಸ ಮಾಡುತ್ತಾರೆ. ಹಿಂದೂಗಳಾಗಿ ನಾವೂ ಒಗ್ಗಟ್ಟಿನಿಂದ ಇರಬೇಕು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ‘ನೀನು ಹಿಂದೂವಾ ಮುಸ್ಲಿಮಾ ಎಂದು ಮಾತ್ರ ಕೇಳಿದ್ದರು. ‘ನೀವು ಶೆಟ್ರಾ, ಭಟ್ರಾ, ಬಿಲ್ಲವನಾ, ಗೌಡಾ, ದಲಿತನಾ’ ಎಂದು ಭಯೋತ್ಪಾದಕರು ಕೇಳಿದ್ದಾರೆಯೇ. ಹಿಂದುಗಳನ್ನು ಗುರಿಯಾಗಿಸಿ ಕೊಂದರು. ಆ ಕಾರಣಕ್ಕಾಗಿ ಜಾತಿ ವ್ಯವಸ್ಥೆ ಬಿಟ್ಟು ಹಿಂದೂಗಳಾಗಿ ದೇವಸ್ಥಾನ ಉಳಿಸಬೇಕು’ ಎಂದು ಪೂಂಜ ಹೇಳಿರುವುದು ವಿಡಿಯೊದಲ್ಲಿದೆ.

‘ತೆಕ್ಕಾರಿನಲ್ಲಿ ಒಬ್ಬನೇ ಒಬ್ಬ ಬ್ಯಾರಿ ಇಲ್ಲದ ಸಂದರ್ಭದಲ್ಲೂ ಇಲ್ಲಿನವರು ಗೋಪಾಲಕೃಷ್ಣ ದೇವರನ್ನು ನಂಬಿಕೊಂಡು ಬಂದಿದ್ದರು. ಬ್ಯಾರಿಗಳು ಬಂದ ಬಳಿಕ, ಟಿಪ್ಪು ಆಕ್ರಮಣದ ಬಳಿಕ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ ಧ್ವಂಸವಾಗಿ ನೆಲದಡಿ ಸೇರಿದರೂ ಹಿಂದೂ ಸಮಾಜ ಮಲಗಿಯೇ ಇತ್ತು. ನಾವು ಏಳಬೇಕಾದರೆ ಕಾಲ ಚಕ್ರ ತಿರುಗಿ 2025ರಲ್ಲಿ ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆ ಆಗಬೇಕಾಯಿತು. ಅದರ ಮರುವರ್ಷ ತೆಕ್ಕಾರಿನಲ್ಲಿ ಹಿಂದೂ ಸಮಾಜ ಒಟ್ಟಾಗಿ ಗೋಪಾಲಕೃಷ್ಣ ದೇವರ ಪ್ರತಿಷ್ಠೆ ಮಾಡುವ ಸಂಕಲ್ಪ ಮಾಡುವಂತಾಯಿತು’ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *