ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ರಾಮನಗುಳಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಕ್ರೇಟಾ ಕಾರಿನಲ್ಲಿ 1 ಕೋಟಿ ರೂ. ಪತ್ತೆಯಾಗಿದೆ. ಜೊತೆಗೆ, ಕಾರಿನಲ್ಲಿ ಕೆಎ19 ಪಾಸಿಂಗ್ನ ಮೂರು ನಂಬರ್ ಪ್ಲೇಟ್ ಪತ್ತೆಯಾಗಿವೆ. ಪತ್ತೆಯಾದ ಕಾರು ಮಂಗಳೂರು ಮೂಲದ್ದಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ.
ಹೆದ್ದಾರಿ ಪಕ್ಕ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕ್ರೇಟಾ ಕಾರನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಠಾಣೆಯಲ್ಲಿ ಕಾರ್ ಅನ್ನು ಪರಿಶೀಲಿಸಿದಾಗ ಲಾಕರ್ ಪತ್ತೆಯಾಗಿದೆ.
ಲಾಕರ್ ತೆರೆದಾಗ, ಅದರಲ್ಲಿದ್ದ ಬ್ಯಾಗ್ನಲ್ಲಿ 1,14,99,500 ರೂಪಾಯಿ ಪತ್ತೆಯಾಗಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೆಎ 51 ಎಮ್ಬಿ 9634 ನಂಬರ್ ಪ್ಲೇಟಿನ ಕಾರು ಇದಾಗಿದೆ. ಕಾರಿನ ರಿಜಿಸ್ಟ್ರೇಷನ್ ನಂಬರ್ ಅನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸಿದ್ದು, ಮಡಿಕೇರಿ ಆರ್ಟಿಓ ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಈ ಕಾರಿನ ಬಾನೆಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ ಹಾಗೂ ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ