ಸಮಗ್ರ ನ್ಯೂಸ್: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರಿಗೆ ಬಿಗ್ ಶಾಕ್ ಎದುರಾಗಿದೆ. ಯಾವುದೇ ಅಲೋಪತಿ ಔಷಧಗಳಿಲ್ಲದೆ 4ನೇ ಹಂತದ ಕ್ಯಾನ್ಸರ್‌ನಿಂದ ತಮ್ಮ ಪತ್ನಿ ಅದ್ಭುತವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಅವರ ವಿರುದ್ಧ ಛತ್ತೀಸ್‌ಗಢ ಸಿವಿಲ್ ಸೊಸೈಟಿ ಆಕ್ರೋಶ ವ್ಯಕ್ತಪಡಿಸಿದೆ.
ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ವಾರದೊಳಗೆ ಸಲ್ಲಿಸುವಂತೆ ಸಿಧು ಅವರ ಪತ್ನಿ ನವಜೋತ್ ಕೌರ್‌ಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಇಲ್ಲವಾದಲ್ಲಿ 850 ಕೋಟಿ ರೂ. ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಸಿಧು ಅವರ ಹೇಳಿಕೆಗಳು ಕ್ಯಾನ್ಸರ್ ಪೀಡಿತರನ್ನು ದಾರಿತಪ್ಪಿಸುತ್ತಿವೆ. ಹೀಗಾಗಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಛತ್ತೀಸ್‌ಗಢ ಸಿವಿಲ್ ಸೊಸೈಟಿ ಒತ್ತಾಯಿಸಿದೆ.
ಆಹಾರದ ನಿಯಂತ್ರಣದಿಂದಾಗಿ ತಮ್ಮ ಪತ್ನಿ ನವಜೋತ್ ಕೌರ್ ಅವರು ನಾಲ್ಕನೇ ಹಂತದ ಕ್ಯಾನ್ಸರ್ (ಸ್ತನ ಕ್ಯಾನ್ಸರ್) ನಿಂದ ಗುಣಮುಖರಾಗಿದ್ದಾರೆ ಎಂದು ಸಿಧು ಅವರು ಇತ್ತೀಚೆಗೆ ಘೋಷಿಸಿದ್ದರು. ಹಾಲು ಮತ್ತು ಸಕ್ಕರೆ ಪದಾರ್ಥಗಳಿಂದ ದೂರವಿದ್ದು, ನಿಂಬೆ ರಸ, ಹಸಿರೆಲೆ, ಅರಿಶಿನ, ಬೇವು ಹಾಗೂ ತುಳಸಿ ಮುಂತಾದ ಪದಾರ್ಥಗಳನ್ನು ಬಳಸಿ ಕೇವಲ 40 ದಿನಗಳಲ್ಲಿ ತಮ್ಮ ಪತ್ನಿ ವೈದ್ಯಕೀಯವಾಗಿ ಕ್ಯಾನ್ಸರ್ ಅನ್ನು ಸೋಲಿಸಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಸಿಧು ಬಹಿರಂಗಪಡಿಸಿದರು.
ಅನೇಕ ವೈದ್ಯಕೀಯ ತಜ್ಞರು ಮತ್ತು ಆಂಕೊಲಾಜಿಸ್ಟ್ಗಳು ಸಹ ಸಿಧು ಅವರ ಕಾಮೆಂಟ್‌ಗಳನ್ನು ಖಂಡಿಸಿದ್ದಾರೆ. ಟಾಟಾ ಮೆಮೋರಿಯಲ್ ಆಸ್ಪತ್ರೆ ಕೂಡ ಸಿಧು ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಘೋಷಿಸಿದೆ. ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿಯಂತಹ ಸಾಬೀತಾದ ಚಿಕಿತ್ಸೆಗಳಿಂದ ಮಾತ್ರ ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ.