ಸಮಗ್ರ ನ್ಯೂಸ್: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ 5 ರೂ. ಚಿಲ್ಲರೆ ಕೊಡದೆ, ಅವರ ಮೇಲೆಯೇ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ
ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಬಿಎಂಟಿಸಿ ಬಸ್ ಕಂಡಕ್ಟರ್‌ನನ್ನು ಅಮಾನತುಗೊಳಿಸಿದೆ. ಈ ಕುರಿತು ಬಿಎಂಟಿಸಿ ಆದೇಶ ಹೊರಡಿಸಿ ಪ್ರಕಟಣೆ ತಿಳಿಸಿದೆ.
ಬಿಎಂಟಿಸಿ ಬಸ್‌ನಲ್ಲಿ ಅಭಿನವ್ ರಾಜ್ ಎಂಬ ಯುವಕ ಪ್ರಯಾಣಿಸುತ್ತಿದ್ದರು. ಅವರು 15 ರೂ. ಟಿಕೆಟ್‌ಗೆ 20 ರೂ. ನೀಡಿದ್ದರು. 5 ರೂ. ಚಿಲ್ಲರೆ ವಾಪಸ್ ಕೇಳಿದಾಗ ಪ್ರಯಾಣಿಕನ ಮೇಲೆ ಕಂಡಕ್ಟರ್ ರೇಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದೇ ಕೋಪದಲ್ಲಿ ಕಂಡಕ್ಟರ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೊ ಮಾಡಿಕೊಂಡಿದ್ದ ಅಭಿನವ್ ರಾಜ್, ಬಿಎಂಟಿಸಿಗೆ ದೂರು ನೀಡಿದ್ದರು. ಅದರಂತೆ, ಅಮಾನತು ಮಾಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಘಟಕ-32ರ ಬಸ್‌ನ ನಿರ್ವಾಹಕರು ಆಗಸ್ಟ್ 6ರಂದು ರಾತ್ರಿ ಸುಮಾರು 9..40 ಸುಮಾರಿಗೆ ಕರ್ತವ್ಯ ನಿರ್ವಹಿಸುವಾಗ ಅಭಿನವ್ ರಾಜ್ ಎಂಬ ಪ್ರಯಾಣಿಕರು 5 ರೂ. ಚಿಲ್ಲರೆ ವಾಪಸ್ ಕೊಡಿ ಎಂಬುದಾಗಿ ಕೇಳಿದ್ದಾರೆ. ಇದಕ್ಕೆ ನಿರ್ವಾಹಕರು ಪ್ರಯಾಣಿಕರ ಎದುರು ಅನುಚಿತವಾಗಿ ವರ್ತನೆ ತೋರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.