Ad Widget

ಕರಾವಳಿಯಲ್ಲಿ ಬಿಸಿಲ ಝಳಕ್ಕೆ ಬಸ್ ಗಾಜು ಪುಡಿಪುಡಿ| ದಿಢೀರ್ ಹೃದಯಾಘಾತದಿಂದ 6 ಮಂದಿ ಸಾವು| ಕಾದು ಕೆಂಡವಾದ ಕಡಲ ನಗರಿ!!

ಸಮಗ್ರ ನ್ಯೂಸ್: ಬಿಸಿಲಿನ ತಾಪದಿಂದ ಕೇರಳ ರಾಜ್ಯ ರಸ್ತೆ ನಿಗಮದ ಮಲಬಾರ್ ಬಸ್ಸಿನ ಮುಂಭಾಗದ ಗಾಜು ಒಡೆದ ಪರಿಣಾಮ, ಇಬ್ಬರು ಮಕ್ಕಳು ಹಾಗೂ ಚಾಲಕ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉರಿಮಜಲು ಎಂಬಲ್ಲಿ ನಡೆದಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಮುಂಭಾಗದ ಗಾಜು ಒಡೆದಿದೆ. ಬಸ್‌ನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬಾಲಕರು ಹಾಗೂ ಬಸ್ ಚಾಲಕ ಗಾಯಗೊಂಡಿದ್ದಾರೆ. ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಬಾಲಕ ಕಾಸರಗೋಡು ನೆಲ್ಲಿಕಟ್ಟೆಯವನು ಎನ್ನಲಾಗಿದೆ.

Ad Widget . Ad Widget .

ಇನ್ನು ಪ್ರತ್ಯೇಕ ಪ್ರಕರಣಗಳಲ್ಲಿ ದಿಢೀರ್ ಹೃದಯಾಘಾತದಿಂದ ಆರು ಮಂದಿ ಸಾವನ್ನಪ್ಪಿದ್ದಾರೆ. ಬಿಸಿಲ ಬೇಗೆಯಿಂದ ಈ ಸಾವು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮೂರು ದಿನಗಳ ಅವಧಿಯಲ್ಲಿ ಆರು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪುತ್ತೂರು ಸಮೀಪ ಕಬಕ ಹೊರವಲಯದ ಉರಿಮಜಲು ಎಂಬಲ್ಲಿ ಆಟೊ ಚಾಲಕರೊಬ್ಬರು ಮಲಗಿದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇ.3ರಂದು ಮಧ್ಯಾಹ್ನ ಮಸೀದಿಯಲ್ಲಿ ನಮಾಜ್ ಮುಗಿಸಿ ಮನೆಗೆ ಬಂದಿದ್ದ ಅಶ್ರಫ್ (38) ವಿಶ್ರಾಂತಿಗಾಗಿ ಬಾಗಿಲು ಹಾಕಿಕೊಂಡು ಮಲಗಿದ್ದರು. ಸಂಜೆ ಅವರ ಪತ್ನಿ ಮನೆಗೆ ಬಂದಾಗ ಬಾಗಿಲು ಹಾಕಿತ್ತು. ಇತರರಿಗೆ ವಿಷಯ ತಿಳಿಸಿ ಬಾಗಿಲು ತೆರೆದಾಗ ಅಶ್ರಫ್ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.

2ನೇ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸ್ವಚ್ಛತಾ ಸಿಬಂದಿಯಾಗಿ ಕೆಲಸ ಮಾಡುತ್ತಿದ್ದ ಕುಮಾರಿ (65) ಮಲಗಿದಲ್ಲೇ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಪೊಲೀಸ್ ಠಾಣೆ ಜೊತೆಗೆ ಹಲವು ಮನೆಗಳಲ್ಲೂ ಕೆಲಸ ಮಾಡುತ್ತಿದ್ದರು. ಗುರುವಾರ ಸಂಜೆವರೆಗೂ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದರು. ರಾತ್ರಿ ಊಟ ಮಾಡಿ ಮಲಗಿದವರು ಬೆಳಗ್ಗೆ ಏಳಲಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಮೂರನೇ ಪ್ರಕರಣದಲ್ಲಿ ಮನೆಯಲ್ಲಿ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಜಿಲ್ಲೆಯ ಏತಡ್ಕ ಕುಬ್ಡಾಜೆ ನಿವಾಸಿ ರಾಧಾಕೃಷ್ಣ ಭಟ್ ಮತ್ತು ಪ್ರೇಮಲತಾ ದಂಪತಿಯ ಪುತ್ರ ಪ್ರಜ್ವಲ್ (26) ಸಾವನ್ನಪ್ಪಿದ್ದಾರೆ. ಗುರುವಾರ (ಮೇ 2) ರಾತ್ರಿ ಮನೆಯಲ್ಲಿ ಕುಸಿದುಬಿದ್ದಿದ್ದ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ.

ನಾಲ್ಕನೇ ಪ್ರಕರಣದಲ್ಲಿ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ದಾವಣಗೆರೆ ಜಿಲ್ಲೆಯ 42 ವರ್ಷದ ಮಹಾರುದ್ರಸ್ವಾಮಿ ನೇತ್ರಾವತಿ ಸ್ನಾನಘಟ್ಟದ ಸಮೀಪ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಬಿಸಿಲಿದ್ದ ವೇಳೆ ಬಸವಳಿದು ಕುಸಿದುಬಿದ್ದ ಅವರು ಅಲ್ಲೇ ಸಾವನ್ನಪ್ಪಿದ್ದಾರೆಎಂದು ಸಂಶಯಿಸಲಾಗಿದೆ.

ಐದನೇ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲ ಪೇಟೆ ವ್ಯಾಪಾರಿ ಸಾದಿಕ್ (35) ಮನೆಯಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ 9.30ರ ವೇಳೆ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದ ಅವರು ,ರಾತ್ರಿ 10.30ಕ್ಕೆ ಹೃದಯಾಘಾತವಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಕಾಸರಗೋಡಿಗೆ ಕರೆದೊಯ್ಯಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಇವರು ಸ್ಥಳೀಯವಾಗಿ ವ್ಯಾಪಾರಿಯಾಗಿ ಜನಪ್ರಿಯರಾಗಿದ್ದರು.

ಆರನೇ ಪ್ರಕರಣದಲ್ಲಿ ಉಪ್ಪಿನಂಗಡಿಯ ನಿನ್ನಿಕಲ್ಲು ನಿವಾಸಿ ಜನಾರ್ದನ (27) ಅವರೂ ಮಲಗಿದಲ್ಲೇ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಜನಾರ್ದನ ಶುಕ್ರವಾರ ಕೆಲಸಕ್ಕೆ ರಜೆ ಮಾಡಿದ್ದರು. ತಾಯಿ ತೋಟಕ್ಕೆ ಹೋಗಿದ್ದ ಸಂದರ್ಭ ಅವರು ಮನೆಯಲ್ಲೇ ಇದ್ದರು. ತಾಯಿ ಮರಳಿದ ವೇಳೆ ಅವರು ಮೃತಪಟ್ಟಿರುವುದು ಕಂಡುಬಂದಿದೆ.

ಒಟ್ಟಾರೆ ಬಿಸಿಲ ಝಳ ಕರಾವಳಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಳೆಯಿಲ್ಲದೆ ಕಂಗಾಲಾಗಿರುವ ಕರಾವಳಿಯಲ್ಲಿ ಇದೀಗ ನೀರಿನ ಕೊರತೆಯೂ‌ ಕಂಡುಬಂದಿದ್ದು, ವರುಣ ಕೃಪೆ ತೋರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

Leave a Comment

Your email address will not be published. Required fields are marked *