ಸಮಗ್ರ ನ್ಯೂಸ್ : ಹಿಂದೂ ವಿವಾಹ ಶಾಸ್ತ್ರಬದ್ಧವಾಗಿ ನಡೆಯದೇ ಇದ್ದಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಅಂದರೆ ಕೇವಲ ಸಂಗೀತ, ನೃತ್ಯ ಸಂಭ್ರಮ ಅಲ್ಲ ಅಥವಾ ವ್ಯವಹಾರ ಅಲ್ಲ. ಕೆಲವು ವಿಧಿ ವಿಧಾನಗಳು, ಸಂಪ್ರದಾಯಗಳ ಮೂಲಕ ನಡೆದರೆ ಮಾತ್ರ ವಿವಾಹಕ್ಕೆ ಮಾನ್ಯತೆ ಇರುತ್ತದೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ ಈ ವಿಧಿವಿಧಾನಗಳು, ಸಂಪ್ರದಾಯಗಳು ನಡೆದರೆ ಮಾತ್ರ ಮದುವೆಗೆ ಮಾನ್ಯತೆ ದೊರೆಯುತ್ತದೆ ಎಂದು ಕೋರ್ಟ್ ಹೇಳಿದೆ.
ಇತ್ತೀಚೆಗೆ ಇಬ್ಬರು ಪೈಲಟ್ ಆಗಿ ಕೆಲಸ ಮಾಡುತ್ತಿದ್ದ ದಂಪತಿ ಸಲ್ಲಿಸಿದ್ದ ವಿಚ್ಛೇದನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಇದ್ದ ಪೀಠ, ಹಿಂದೂ ವಿವಾಹವು ಸೂಕ್ತವಾದ ಆಚರಣೆಗಳು ಇಲ್ಲದೆಯೇ ಆಗಿದ್ದಲ್ಲಿ, ಅಂತಹ ವಿವಾಹವನ್ನು ‘ಹಿಂದೂ ವಿವಾಹವೆಂದು ಪರಿಗಣಿಸಲಾಗದು’ ಎಂದು ಏಪ್ರಿಲ್ 19ರ ಆದೇಶದಲ್ಲಿ ಹೇಳಿತ್ತು.
‘ಹಿಂದೂ ವಿವಾಹದಲ್ಲಿ ಸಪ್ತಪದಿ ಅಂದರೆ ಋಗ್ವೇದದ ಪ್ರಕಾರ, ಏಳನೆಯ ಹೆಜ್ಜೆಯನ್ನು ಪೂರ್ಣಗೊಳಿಸಿದ ನಂತರ ವರನು ವಧುವಿಗೆ ‘ಏಳು ಹೆಜ್ಜೆಗಳ ಮೂಲಕ ನಾವು ಸಖರಾಗಿದ್ದೇವೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಚೆನ್ನಾಗಿ ಯೋಚಿಸಿ ನಿರ್ಧಾರಕ್ಕೆ ಬರಬೇಕು. ಹಿಂದೂ ವಿವಾಹ ಅಂದರೆ ಅದೊಂದು ಸಂಸ್ಕಾರ. ಭಾರತೀಯ ಸಮಾಜದಲ್ಲಿ ಮದುವೆಗೆ ಅದರದ್ದೇ ಆದ ಮೌಲ್ಯಗಳಿವೆ ಎಂದು ಹೇಳಿದೆ.
ಮದುವೆ ಎಂಬುದು ಕೇವಲ ನೃತ್ಯ, ಸಂಗೀತ, ಮನೋರಂಜನೆಗಾಗಿ ನಡೆಯುವ ಕಾರ್ಯಕ್ರಮ ಅಲ್ಲ. ಇದು ಭಾರತೀಯ ಕುಟುಂಬ ವ್ಯವಸ್ಥೆಗೆ ಅಡಿಪಾಯ ಹಾಕುವ ವಿಚಾರವಾಗಿದೆ. ಇದು ಒಬ್ಬ ಪುರುಷ ಮತ್ತು ಮಹಿಳೆಗೆ ಗಂಡ-ಹೆಂಡತಿ ಎಂಬ ಸ್ಥಾನಮಾನವನ್ನು ನೀಡುವ ವ್ಯವಸ್ಥೆ.
ಅದು ಬಹಳ ಪವಿತ್ರವಾದ ವಿಚಾರವಾಗಿದ್ದು, ಅದು ಒಬ್ಬ ವ್ಯಕ್ತಿಗೆ ಜೀವನ ಪರ್ಯಾಂತ ಗೌರವ, ಸಮಾನತೆ, ಒಮ್ಮತದ ಮತ್ತು ಆರೋಗ್ಯಯುತ ಸಂಬಂಧವನ್ನು ನೀಡುತ್ತದೆ. ಇದು ಪುರುಷ ಮತ್ತು ಮಹಿಳೆಯ ನಡುವೆ ಸಂಬಂಧವನ್ನು ಬೆಸೆಯಲು ಆಚರಿಸುವ ವಿಧ್ಯುಕ್ತ ಕಾರ್ಯಕ್ರಮವಾಗಿದೆ. ಪತಿ ಪತ್ನಿಯ ಸ್ಥಾನವನ್ನು ಪಡೆಯಲು ಯುವಕ-ಯುವತಿಯರು ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಮಾನ್ಯವಾದ ವಿವಾಹ ಆಚರಣೆ ಇಲ್ಲದಿದ್ದರೂ ವಿವಾಹ ಆಗಿದೆ ಎಂಬಂತೆ ತೋರಿಸಿಕೊಳ್ಳುವ ಕ್ರಮವನ್ನು ನಾವು ಒಪ್ಪುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.