ಸಮಗ್ರ ನ್ಯೂಸ್ : ಡಾ.ಬಾಬಾ ಸಾಹೇಬ್ ಅಂಬೇಡ್ಕರ್ರವರು ಜನ್ಮತಾಳಿದ ದಿನವನ್ನ ಇಡೀ ದೇಶದ್ಯಾಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಕಲಬುರಗಿ ನಗರದ ಅಶೋಕ್ ನಗರ ಬಡಾವಣೆಯ ಜನ, ಅಂಬೇಡ್ಕರ್ ಅವರ ಮೂರ್ತಿ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ನೂರಾರು ಜನ ಭಾಗಿಯಾಗಿದ್ದರು. ಅದೇ ಬಡಾವಣೆಯ 21 ವರ್ಷದ ಆಕಾಶ್ ಮತ್ತು ನವೀನ್ ಎಂಬಾತನ ಮಧ್ಯೆ ಮೆರವಣಿಗೆಯಲ್ಲಿ ಡಿಜೆ ಮೇಲೆ ಕುಳಿತುಕೊಳ್ಳುವ ವಿಚಾರಕ್ಕೆ ಗಲಾಟೆ ಆಗಿ ಮಾರಮಾರಿ ನಡೆದಿದೆ.
ಇದರಿಂದ ಕೆರಳಿದ ನವೀನ್, ಅಲ್ಲಿಂದ ತೆರಳಿ ಚಾಕುವಿನೊಂದಿಗೆ ಜೇವರ್ಗಿ ಕ್ರಾಸ್ ಬಳಿ ಬಂದಿದ್ದಾನೆ. ಬಂದಿದ್ದೆ ತಡ ಏಕಾಏಕಿ ಆಕಾಶ್ಜಿಗೆ ಚಾಕುವಿನಿಂದ ಮನಬಂದಂತೆ ದೇಹದ ತುಂಬೆಲ್ಲ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು.
ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕ್ ನಗರ ಠಾಣೆ ಪೊಲೀಸರು ಪ್ರಮುಖ ಆರೋಪಿ ನವೀನ್ ಮತ್ತು ಆದರ್ಶ್ ಹಾಗೂ ಅಂಬರೀಶ್ ಸೇರಿದಂತೆ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನು ಕೊಲೆಯಾಗಿದ್ದ ಆಕಾಶ್ ಎಸ್ಎಸ್ಎಲ್ಸಿ ಮುಗಿಸಿ ಕಾಲೇಜು ಮೆಟ್ಟಿಲು ಹತ್ತದೇ ಗಲ್ಲಿಯಲ್ಲಿ ಓಡಾಡಿಕೊಂಡು ಇದ್ದನು. ಕೊಲೆ ಮಾಡಿದ ನವೀನ್ ಮತ್ತು ಕೊಲೆಯಾದ ಆಕಾಶ್ ಒಂದೇ ಬಡಾವಣೆಯ ನಿವಾಸಿಗಳು ಮತ್ತು ಸ್ನೇಹಿತರು.
ಇಬ್ಬರ ಮಧ್ಯೆ ಮೇಲಿಂದ ಮೇಲೆ ಸಣ್ಣಪುಟ್ಟ ಕಾರಣಕ್ಕಾಗಿ ಜಗಳ ನಡಿತಾನೇ ಇತ್ತು. ಸಣ್ಣ ಜಗಳ ಇದೀಗ ಬಾಳಿಬದುಕಬೇಕಾಗಿದ್ದ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಆಕಾಶ್ ಕೊಲೆಗೆ ಸಂಬಂಧಿಸಿದಂತೆ ಅಶೋಕ್ ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ತೀವ್ರ ವಿಚಾರಣೆ ಒಳಪಡಿಸಿದ್ದಾರೆ.
ಆಕಾಶ್ ಕೊಲೆಗೆ ಬೇರೆ ಏನಾದರೂ ಕಾರಣ ಇದೆಯಾ ಅನ್ನೊದರ ಬಗ್ಗೆ ಪೊಲೀಸರು ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದೆನೇ ಇರಲಿ ಡಾ.ಅಂಬೇಡ್ಕರ್ ಮೆರವಣಿಗೆಯಲ್ಲಿ ಯುವಕನ ನೆತ್ತರು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾಗಿದ್ದು ಮಾತ್ರ ದುರಂತವೇ ಸರಿ.