ಸಮಗ್ರ ನ್ಯೂಸ್: ಎ.14ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದಾರೆ. ಅದೇ ರೀತಿ ಮಂಗಳೂರಿಗೆ ಬಂದು ಬ್ರಿಜೇಶ್ ಚೌಟ ಮತ್ತು ಶ್ರೀನಿವಾಸ್ ಪೂಜಾರಿ ಪರ ರೋಡ್ ಶೋ ನಡೆಸುವ ಮೂಲಕ, ಪ್ರಧಾನಿ ಮತಯಾಚಿಸಿದ್ದಾರೆ.
ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಪ್ರಧಾನಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ಪ್ರಧಾನಿಯವರ ವಿರುದ್ದ ಹರಿಹಾಯ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಎತ್ತಿದ ಪ್ರಶ್ನೆಗಳು ಇಂತಿದೆ…
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ದಕ್ಷಿಣ ಕನ್ನಡಕ್ಕೆ ನಿಮಗೆ ಸ್ವಾಗತ. ಕಳೆದ 33 ವರ್ಷಗಳಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಅದಕ್ಕಿಂತ ಹಿಂದಿನ 39 ವರ್ಷ ಈ ಕ್ಷೇತ್ರವನ್ನು ನಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಕಳೆದ 33 ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ನೀವು ಕೊಟ್ಟದ್ದೆಷ್ಟು? ಎನ್ನುವ ಲೆಕ್ಕ ಕೊಡಿ, ಈ ಜಿಲ್ಲೆಯಿಂದ ಏನು ಕಿತ್ತುಕೊಂಡಿದ್ದೀರಿ ಎನ್ನುವ ಲೆಕ್ಕವನ್ನು ನಾನು ಕೊಡುತ್ತೇನೆ. ಬಜ್ಪೆಯ ವಿಮಾನ ನಿಲ್ದಾಣದ ಕನಸು ಕಂಡವರು ಉಳ್ಳಾಲ ಶ್ರೀನಿವಾಸ ಮಲ್ಯ. ಮಲ್ಯರ ಕನಸನ್ನು ನನಸು ಮಾಡಿದವರು ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ. ಶ್ರೀನಿವಾಸ ಮಲ್ಯರ ಪ್ರಯತ್ನದ ಫಲವಾದ ಈ ವಿಮಾನ ನಿಲ್ದಾಣವನ್ನು ನೀವು ನಿಮ್ಮ ಉದ್ಯಮಿ ಮಿತ್ರ ಗೌತಮ ಅದಾನಿ ಅವರಿಗೆ ನೀಡಿದಿರಿ. ಈಗ ಹೇಳಿ, ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು? ಕಿತ್ತುಕೊಂಡದ್ದೆಷ್ಟು?
ನವಮಂಗಳೂರು ಬಂದರು ಕೂಡಾ ಸಂಸದ ಯು.ಶ್ರೀನಿವಾಸ ಮಲ್ಯ ಅವರ ಕನಸಾಗಿತ್ತು. ಮಲ್ಯರ ಮಾತಿಗೆ ಮನ್ನಣೆ ಕೊಟ್ಟು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ಪಣಂಬೂರಿನಲ್ಲಿ ಬಂದರಿಗೆ ಚಾಲನೆ ನೀಡಿದರು. ಈ ಬಂದರನ್ನು ಕೂಡಾ ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರಲು ಹೊರಟಿದ್ದೀರಿ. ಈಗ ಹೇಳಿ ನರೇಂದ್ರ ಮೋದಿ ಅವರೇ, ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದೆಷ್ಟು?
ಬಜ್ಪೆ ವಿಮಾನ ನಿಲ್ದಾಣ ಮತ್ತು ಎನ್‌ಎಂಪಿಟಿ ಮಾತ್ರವಲ್ಲ ಇಲ್ಲಿನ ರೀಜನಲ್ ಎಂಜನಿಯರಿಂಗ್ ಕಾಲೇಜ್, ಎಂಸಿಎಫ್, ಎಂಆರ್‌ಪಿಎಲ್, ಬೈಕಂಪಾಡಿ ಕೈಗಾರಿಕ ಪ್ರದೇಶ, ರಾಷ್ಟ್ರೀಯ ಹೆದ್ದಾರಿ 66 ಮಾತ್ರವಲ್ಲ ಕರಾವಳಿಯಲ್ಲಿ ರಕ್ತರಹಿತ ಕ್ರಾಂತಿಯನ್ನೇ ಉಂಟು ಮಾಡಿರುವ ಭೂ ಸುಧಾರಣೆ ಕಾಯ್ದೆ ಕೂಡಾ ಜಾರಿಗೆ ಬಂದದ್ದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾಲದಲ್ಲಿ. ಪ್ರಧಾನಿಯಾಗಿ ನಿಮ್ಮ ಹತ್ತು ವರ್ಷದ ಕಾಲದಲ್ಲಿ ಇಲ್ಲವೇ ನಿಮ್ಮ ಸಂಸದರು ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ 33 ವರ್ಷಗಳ ಅವಧಿಯಲ್ಲಿ ಈ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಈಗ ಹೇಳಿ ನರೇಂದ್ರ ಮೋದಿ ಅವರೇ, ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದೆಷ್ಟು? ಕಿತ್ತುಕೊಂಡದ್ದೆಷ್ಟು?
ಖ್ಯಾತ ಉದ್ಯಮಿ ಹಾಜಿ ಅಬ್ದುಲ್ಲಾ ಅವರು 1906ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಿಸಿದರು. ನೀವು ಇದನ್ನು ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ. ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರು ಟಿಎಂಎ ಪೈ, ಉಪೇಂದ್ರ ಪೈ. ವಾಮನ್ ಕುಡ್ವಾ ಅವರು 1925ರಲ್ಲಿ ಸ್ಥಾಪಿಸಿದ್ದು ಸಿಂಡಿಕೇಟ್ ಬ್ಯಾಂಕ್. ಲಾಭದಲ್ಲಿದ್ದ ಈ ಬ್ಯಾಂಕನ್ನು ಕೆನರಾ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ. ದಕ್ಷಿಣ ಕನ್ನಡದ ಉದ್ಯಮಿ ಮತ್ತು ಸಮಾಜ ಸೇವಕ ರೈತರಿಗಾಗಿಯೇ ವಿಜಯ ದಶಮಿಯ ದಿನವೇ 1931ರಲ್ಲಿ ಸ್ಥಾಪಿಸಿದ್ದು ವಿಜಯಾ ಬ್ಯಾಂಕ್. ಇದನ್ನು ನಿಮ್ಮ ರಾಜ್ಯದ ನಷ್ಟದಲ್ಲಿದ್ದ ಬರೋಡಾ ಬ್ಯಾಂಕ್ ಜೊತೆ ವಿಲೀನಗೊಳಿಸಿದಿರಿ. ಈಗ ಹೇಳಿ ನರೇಂದ್ರ ಮೋದಿ ಅವರೇ, ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?
ಮೂರು ದಶಕಗಳಿಂದ ನಿಮ್ಮ ಪಕ್ಷವನ್ನು ಗೆಲ್ಲಿಸುತ್ತಾ ಬಂದಿರುವ ದಕ್ಷಿಣ ಕನ್ನಡದ ಜನತೆಯ ಬಗ್ಗೆ ಯಾಕೆ ನಿಮಗೆ ಈ ಪರಿಯ ದ್ವೇಷ? ಈ ಜಿಲ್ಲೆಯಲ್ಲಿ ಬಹುಸಂಖ್ಯಾತ ಸಮುದಾಯವಾದ ಬಿಲ್ಲವರ ಆರಾಧ್ಯ ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು. ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯ ಸರ್ಕಾರ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನ ಮಾಡಲು ಹೊರಟರೆ ಅದಕ್ಕೆ ನೀವು ಅಡ್ಡಗಾಲು ಹಾಕಿದಿರಿ. ನಾರಾಯಣ ಗುರುಗಳಿಗೆ ಹಿಂದೂ ಧರ್ಮದ ಗುರುಗಳ ಪಕ್ಕದಲ್ಲಿ ಜಾಗ ಇಲ್ಲವೇ? ನಾರಾಯಣ ಗುರುಗಳಿಗೆ ನಿಮ್ಮ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದ್ದು ಸಾಕಾಗಲಿಲ್ಲ ಎಂದೋ ಏನೋ? ಯಾರೋ ತಲೆತಿರುಕನ ನೇತೃತ್ವದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ನೇಮಿಸಿದ್ದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಶಾಲಾ ಪಠ್ಯದಲ್ಲಿದ್ದ ನಾರಾಯಣ ಗುರುಗಳ ಪಾಠವನ್ನೂ ಕಿತ್ತು ಹಾಕಿತು. ನಾರಾಯಣ ಗುರುಗಳಿಗೆ ಮಾಡಿರುವ ಅಪಮಾನದ ವಿರುದ್ಧ ಜನ ಸಿಡಿದೆದ್ದು ಪ್ರತಿಭಟನೆ ನಡೆಸಿದರೂ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದಕ್ಕೆ ಲಕ್ಷ್ಯವನ್ನೇ ಕೊಡಲಿಲ್ಲ. ಈಗ ಹೇಳಿ ನರೇಂದ್ರ ಮೋದಿ ಅವರೇ, ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು?
ಅಂತಿಮವಾಗಿ ನಿಮ್ಮ 33 ವರ್ಷಗಳ ಅತ್ಯಂತ ಮಹತ್ವದ ಕೊಡುಗೆ- ಜಾತಿ-ಧರ್ಮಗಳ ಅಂತರವನ್ನು ಮೀರಿ ಒಂದು ಕುಟುಂಬದಂತೆ ಸೌಹಾರ್ದತೆಯಿಂದ ಬದುಕುತ್ತಿದ್ದ ಜಿಲ್ಲೆಯನ್ನು ‘ಕೋಮುವಾದದ ಪ್ರಯೋಗಶಾಲೆ”ಯನ್ನಾಗಿ ಪರಿವರ್ತಿಸಿದ್ದು. ಇದರ ಫಲವಾಗಿ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಬುದ್ದಿವಂತರ ಜಿಲ್ಲೆ ಎಂದೇ ಖ್ಯಾತಿ ಪಡೆದಿದ್ದ ಜಿಲ್ಲೆ ಇಂದು ಕೋಮುವಾದದ ಕಳಂಕ ಹಚ್ಚಿಕೊಂಡು ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ಈಗ ಹೇಳಿ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು? ಕಿತ್ತುಕೊಂಡದ್ದೆಷ್ಟು? ಹೀಗೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪ್ರಶ್ನೆ ಕೇಳಿದ್ದಾರೆ.