ಸಮಗ್ರ ನ್ಯೂಸ್ : ಎಂಜಿನಿಯರಿಂಗ್, ಕೃಷಿ, ವಿಜ್ಞಾನ, ವೆಟರಿನರಿ, ಫಾರ್ಮಸಿ, ಬಿಎಸ್‍ಸಿ(ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸುಗಳಿಗೆ 2024ನೇ ಸಾಲಿನಲ್ಲಿ ಪ್ರವೇಶಾತಿಗೆ ಮೆರಿಟ್ ನಿರ್ಧರಿಸಲು ಸಿಇಟಿ ಪರೀಕ್ಷೆಯು ಏಪ್ರಿಲ್, 18 ಮತ್ತು 19 ರಂದು ಮಡಿಕೇರಿ 5 ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲರ ಸಂಯುಕ್ತ ಪದವಿ ಪೂರ್ವ ಕಾಲೇಜು, ಸಂತ ಜೋಸೆಫರ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಹಾಗೂ ಕೊಡಗು ವಿದ್ಯಾಲಯ ಈ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಈ ಕಾರ್ಯವನ್ನು ಯಾವುದೇ ಅಡಚಣೆ ಮತ್ತು ಅವ್ಯವಹಾರಗಳಿಲ್ಲದೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿಷೇಧಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ನಿಷೇಧಿತ ಪ್ರದೇಶದ ಒಳಗೆ ಅಭ್ಯರ್ಥಿಗಳು ಹಾಗೂ ಪರೀಕ್ಷಾ ಕರ್ತವ್ಯ ನಿರತ ಅಧಿಕಾರಿ/ ಸಿಬ್ಬಂದಿಗಳನ್ನು ಹೊರತುಪಡಿಸಿ, ಉಳಿದಂತೆ ಯಾರೇ ವ್ಯಕ್ತಿಗಳಿಗೆ ಪ್ರವೇಶ ಇರುವುದಿಲ್ಲ. ಈ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು ತಿಳಿಸಿದ್ದಾರೆ.