ಸಮಗ್ರ ನ್ಯೂಸ್: ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಜೈರಾಮ್ ರಮೇಶ್ ನೇತೃತ್ವದಲ್ಲಿ ತೇಜಸ್ವಿನಿ ಗೌಡ ಕಾಂಗ್ರೆಸ್ ಸೇರ್ಪಡೆಯಾದರು. ಬಳಿಕ ಮಾತನಾಡಿದ ತೇಜಸ್ವಿನಿ ಗೌಡ, ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ 95 ವರ್ಷ ಹಳೆಯ ಪಕ್ಷವಾಗಿದೆ. ನಾನು ವಾಪಸ್ ನನ್ನ ಮನೆಗೆ ಸೇರುತ್ತಿದ್ದೇನೆ ಎಂದು ನುಡಿದರು.
ಜೊತೆಗೆ, ದೇಶದಲ್ಲಿ ಎಲ್ಲೆಡೆ ಪ್ರಧಾನಿ ಮೋದಿ ಅವರದ್ದು ಅಷ್ಟೊಂದು ಹವಾ ಇದೆ ಎನ್ನುವುದು ನಿಜವಾಗಿದ್ದರೆ ಏಕೆ ಹಾಲಿ ಕೇಂದ್ರ ಮಂತ್ರಿಗಳನ್ನು ಬದಲಾಯಿಸಿದ್ದಾರೆ. ಎ. ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ ಅವರ ಕ್ಷೇತ್ರಗಳನ್ನು ಬದಲಿಸಿದ್ದು ಏಕೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ , ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಲ್ಲರೂ ನನಗೆ ಪ್ರೇರಣೆ ಎಂದು ತೇಜಸ್ವಿನಿ ಗೌಡ ಹೇಳಿದ್ದಾರೆ.