ಸಮಗ್ರ ನ್ಯೂಸ್ : ಉಪ್ಪಿನಂಗಡಿಯಿಂದ ಕಡಬ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಸರಕಾರಿ ಬಸ್ ನಿಗದಿತ ಸ್ಥಳದಲ್ಲಿ ನಿಲ್ಲಿಸದೆ ಯುವತಿಯ ಜತೆ ಅನುಚಿತ ವರ್ತನೆ ತೋರಿದ ಅರೋಪದಲ್ಲಿ ಬಸ್ ನಿರ್ವಾಹಕನನ್ನು ಕಡಬ ಪೋಲೀಸರು ವಶಕ್ಕೆ ಪಡೆದ ಘಟನೆ ಕಡಬದಲ್ಲಿ ಶನಿವಾರ ಸಂಭವಿಸಿದೆ.
ರಾಮಕುಂಜ ಸಮೀಪದ ಕುಂಡಾಜೆ ಎಂಬ ಪ್ರದೇಶದಿಂದ ಯುವತಿ ಬಸ್ ಹತ್ತಿದ್ದು, ಆಲಂಕಾರಿಗೆ ಟಿಕೆಟ್ ಕೊಡಿ ಎಂದು ಯುವತಿ ಹೇಳಿದ್ದರೂ ನಿರ್ವಾಹಕ ಕಡಬಕ್ಕೆ ಟಿಕೆಟ್ ನೀಡಿ ಯುವತಿ ಹೇಳಿದ ಸ್ಥಳದಲ್ಲಿ ನಿಲ್ಲಿಸದೆ ಪ್ರಯಾಣ ಮುಂದುವರಿಸಿದರು. ಯುವತಿ ತಾನು ಇಳಿಯುವ ಸ್ಥಳ ಬಂದಾಗ ಬಸ್‍ನಿಂದ ಇಳಿಯಲು ಬಾಗಿಲಿನತ್ತ ಹೊರಟಾಗ ನಿರ್ವಾಹಕ ಅನುಚಿತ ವರ್ತನೆ ತೋರಿ ಇಳಿಯದಂತೆ ತಡೆ ಹಾಕಿದ ಎಂದು ಆರೋಪಿಸಲಾಗಿದೆ.
ಆ ಬಗ್ಗೆ ಯುವತಿ ಪರಿಚಿತರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಡಬ ಬಳಿಯ ಸಂಘಟನೆಯೊಂದರ ಸದಸ್ಯರು ಕಡಬ ಠಾಣೆಗೆ ಮಾಹಿತಿ ನೀಡಿದ್ದರು. ಯುವತಿ ನೀಡಿದ ದೂರಿನಂತೆ ಬಸ್ ನಿರ್ವಾಹಕನನ್ನು ಪೋಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿ ಕಳುಹಿಸಿ ಕೊಟ್ಟಿದ್ದಾರೆ. ಪ್ರಕರಣದ ಬಗ್ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ.






