ಸಮಗ್ರ ನ್ಯೂಸ್: ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ರಹಿತ ದಿವಾಳಿಗೆ ತಲುಪಿದೆ. ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಕಾಮಗಾರಿಗಳೆಲ್ಲ ಕೇಂದ್ರ ನೆರವಿನಿಂದ ನಡೆಯುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಾಜ್ಯ ಬಜೆಟ್ ಗ್ಯಾರಂಟಿ ಯೋಜನೆಗಳ ಸುತ್ತ ಗಿರಕಿ ಹೊಡೆದಿದೆ. ಆದರೆ ಸಂಪನ್ಮೂಲ ಕ್ರೋಢೀಕರಿಸಲು ನಿರ್ದಿಷ್ಟ ಯೋಜನೆ ಹಾಕಿಕೊಂಡಿಲ್ಲ. ಇದರಿಂದಾಗಿ ಅಭಿವೃದ್ಧಿಗೆ ಅನುದಾನ ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಬಜೆಟ್‌ನ ಶೇ.40 ಕೂಡ ಕಾರ್ಯಗತವಾಗಿಲ್ಲ. ಸಾಗರಮಾಲಾ ಯೋಜನೆಯ 26 ಕಾಮಗಾರಿಗಳಲ್ಲಿ ಒಂದು ಕೂಡ ಆಗಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ 2 ಕೋಟಿ ರೂ. ಗಳಲ್ಲಿ ಕೇವಲ 50 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ನಗರಗಳ ಅಭಿವೃದ್ಧಿಗೆ 30 ಕೋಟಿ ರೂ. ಘೋಷಿಸಿದ ಸರ್ಕಾರ ಅದರಲ್ಲಿ ಶೇ.80 ಮೊತ್ತವನ್ನು ದೇವಸ್ಥಾನಗಳ ಹುಂಡಿಯಿAದ ತೆಗೆಯುತ್ತಿದೆ ಎಂದು ಆರೋಪಿಸಿದರು.
ವಿವಿಧ ನಿಗಮಗಳಿಗೆ ಅನುದಾನ ನೀಡುವಾಗ ಸರ್ಕಾರ ತುಷ್ಠೀಕರಣ ನೀತಿ ಅನುಸರಿಸಿದೆ. ಸರ್ಕಾರ ರೋಗಗ್ರಸ್ತ ಮಾನಸಿಕತೆಯನ್ನು ಹೊಂದಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕಾದರೆ ಬಿಜೆಪಿ ಹೋರಾಟ ಮಾಡಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ದೇಶದಲ್ಲಿ 370ಕ್ಕೂ ಅಧಿಕ ಸೀಟುಗಳಿಂದ ಗೆಲ್ಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ನುಡಿದಂತೆ ನಡೆಯುತ್ತೇವೆ ಎನ್ನುವ ಕಾಂಗ್ರೆಸ್ ಸರ್ಕಾರ, ನುಡಿದಂತೆ ನಡೆಯಲೂ ಇಲ್ಲ, ನಡೆದಂತೆ ನುಡಿಯಲೂ ಇಲ್ಲ. ಒಂದು ಕಡೆಯಿಂದ ಗ್ಯಾರಂಟಿ ಹೆಸರಿನಲ್ಲಿ ನೀಡಿ, ಇನ್ನೊಂದೆಡೆಯಿAದ ಬೆಲೆ ಹೆಚ್ಚಳಗೊಳಿಸುವ ಮೂಲಕ ತಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಉಜ್ವಲ, ಜನಧನ್, ವಿಶ್ವಕರ್ಮ ಯೋಜನೆ, ಪಿಎಂ ಆವಾಸ್, ಜಲಜೀವನ್, ಮಾತೃ ವಂದನಾ ಸೇರಿದಂತೆ ಅನೇಕ ಯೋಜನೆಗಳನ್ನು ಮಹಿಳೆಯರ ಕೇಂದ್ರೀಕರಿಸಿ ಜಾರಿಗೊಳಿಸಿದೆ ಎಂದು ಅವರು ವಿವರಿಸಿದರು. ಮುಖಂಡರಾದ ನಿತಿನ್ ಕುಮಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ವಕ್ತಾರ ವಸಂತ ಪೂಜಾರಿ ಇದ್ದರು.
ಲೋಕ ಚುನಾವಣೆಗೆ ಜನಾಭಿಪ್ರಾಯ ಸಂಗ್ರಹ ಅಭಿಯಾನ ಬಿಜೆಪಿಯ 33 ಶಾಸಕರ ತಂಡ ರಾಜ್ಯದ 21 ಜಿಲ್ಲೆಗಳಿಗೆ ಲೋಕಸಭಾ ಚುನಾವಣೆ ಪೂರ್ವ ಜನಾಭಿಪ್ರಾಯ ಸಂಗ್ರಹ ಅಭಿಯಾನ ನಡೆಸುತ್ತಿದೆ.
ಮಂಗಳೂರಿಗೆ ನಾನು, ಭಾರತಿ ಶೆಟ್ಟಿ ಹಾಗೂ ಉಪ ಸಭಾಪತಿ ಪ್ರಾಣೇಶ್ ಭೇಟಿ ನೀಡುತ್ತಿದ್ದೇವೆ. ಜಿಲ್ಲಾ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಆರೋಪಕ್ಕೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡುವುದು. ನವ ಮತದಾರರ ಸಮಾವೇಶ, ಸ್ವಸಹಾಯ ಸಂಘಗಳ ಸದಸ್ಯರ ಜತೆ ಮಾತುಕತೆ, ಸಹಕಾರಿ, ಸಂಘಸAಸ್ಥೆಗಳ ಪ್ರಮುಖರೊಂದಿಗೆ ಮಾತುಕತೆ ನಡೆಯಲಿದ್ದು, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಕೂಡ ಭೇಟಿ ನೀಡಲಿದೆ. ಇದು ಜಿಲ್ಲೆಯ ಮೊದಲ ಸುತ್ತಿನ ಪ್ರವಾಸವಾಗಿದೆ ಎಂದು ತಂಡದ ದ.ಕ. ಉಸ್ತುವಾರಿ ಪ್ರತಾಪ್‌ಸಿಂಹ ನಾಯಕ್ ಹೇಳಿದರು.