ಸಮಗ್ರ ನ್ಯೂಸ್: ವಿಶ್ವದಾದ್ಯಂತ ಜನಪ್ರಿಯ ಜಾಲತಾಣವಾದ ಫೇಸ್ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಸಮಸ್ಯೆಯಿಂದ ಬಳಕೆದಾರರು ಪರದಾಡುವಂತಾಗಿತ್ತು. ಅಷ್ಟೇ ಅಲ್ಲ ಷೇರುಗಳ ಬೆಲೆಯೂ ಗಣನೀಯ ಕುಸಿತ ಕಂಡಿದ್ದು, ಇದರಿಂದ 829 ಕೋಟಿ ರೂಪಾಯಿ ನಷ್ಟವಾಗುವ ಮೂಲಕ ಮಾರ್ಕ್ ಜುಗರ್ ಬರ್ಗ್ ಒಡೆತನದ ಮೆಟಾ ಮತ್ತೊಮ್ಮೆ ದೊಡ್ಡ ಸುದ್ದಿಯಲ್ಲಿದ್ದಂತಾಗಿದೆ.
ಮೆಟಾದ ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಥ್ರೆಡ್ಸ್ ಭಾರತ ಸೇರಿದಂತೆ ಜಾಗತಿಕವಾಗಿ ಸರ್ವರ್ ಡೌನ್ ಆಗಿ ಎಲ್ಲರ ಖಾತೆಗಳು (ಮಂಗಳವಾರ ರಾತ್ರಿ 8.53) ದಿಢೀರನೆ ಲಾಗ್ ಔಟ್ ಆಗಿತ್ತು.
ಭಾರತದಲ್ಲಿ ಸಾವಿರಾರು ಬಳಕೆದಾರರ ಫೇಸ್ ಬುಕ್, ಇನ್ಸ್ಟಾಗ್ರಾಮ್ ಖಾತೆಗಳು ದಿಢೀರನೆ ಲಾಗ್ ಔಟ್ ಆಗಿದ್ದು, ನಂತರ ಸಮಸ್ಯೆ ಕುರಿತು ಗಮನಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ.
ಈ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಸಂದರ್ಭದಲ್ಲಿ ಅಮೆರಿಕದ ಷೇರುಮಾರುಕಟ್ಟೆ ವಹಿವಾಟು ನಡೆಯುತ್ತಿದ್ದು, ಇದು ನೇರವಾಗಿ ಮೆಟಾ ಷೇರು ವಹಿವಾಟಿನ ಮೇಲೆ ಪರಿಣಾಮ ಬೀರಿತ್ತು. ಕಂಪನಿಯ ಷೇರಿನ ಬೆಲೆ ಶೇ.1.60ರಷ್ಟು ಕುಸಿತ ಕಂಡಿತ್ತು.
ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮೆಟಾ ಬಾಸ್ ಮಾರ್ಕ್ ಜುಗರ್ ಬರ್ಗ್ ಗೆ ಮಂಗಳವಾರದ ವಹಿವಾಟಿನಲ್ಲಿ ಬರೊಬ್ಬರಿ 100 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು (829 ಕೋಟಿ) ನಷ್ಟ ಉಂಟಾಗಿರುವುದಾಗಿ ವರದಿ ತಿಳಿಸಿದೆ.