ಸಮಗ್ರ ನ್ಯೂಸ್: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು, ಅನಪೇಕ್ಷಿತ (ಸ್ಪ್ಯಾಮ್) ಕರೆಗಳ ಹಾವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ, ಅಪರಿಚಿತರು ಕರೆ ಮಾಡಿದಾಗ ಅವರ ಹೆಸರು ಮೊಬೈಲ್ ಸ್ಕ್ರೀನ್‍ಗಳಲ್ಲಿ ಬಿತ್ತರಗೊಳ್ಳುವಂತೆ ಮಾಡುವ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗಾಗಲೇ ಖಾಸಗಿಯಾಗಿ ಟ್ರೂ ಕಾಲರ್‍ನಂತಹುಗಳು ಇಂತಹ ಸೇವೆಯನ್ನು ಒದಗಿಸುತ್ತಿವೆ. ಕಾಲಿಂಗ್ ನೇಮ್ ಪ್ರೆಸೆಂಟೇಷನ್ (ಕರೆ ಮಾಡುವವರ ಹೆಸರು ಪ್ರಸ್ತುತಿ) ಎಂಬ ಸೌಲಭ್ಯ ಇದಾಗಿದೆ.
ದೇಶದ ಎಲ್ಲ ಮೊಬೈಲ್ ನೆಟ್‍ವರ್ಕ್‍ಗಳಲ್ಲೂ ಇದನ್ನು ಜಾರಿಗೆ ತರಲು ಟ್ರಾಯ್ ಸಲಹೆ ಮಾಡಿದೆ. ಈ ಸೌಲಭ್ಯದಿಂದಾಗಿ ಮೊಬೈಲ್ ಗ್ರಾಹಕರಿಗೆ ತಮಗೆ ಕರೆ ಮಾಡುತ್ತಿರುವವರು ಯಾರು? ಅದೇನು ಅನಪೇಕ್ಷಿತ ಕರೆಯೇ ಎಂಬುದು ಅದನ್ನು ಸ್ವೀಕರಿಸುವ ಮೊದಲೇ ಗೊತ್ತಾಗಲಿದೆ. ಸಿಮ್ ಖರೀದಿಸುವಾಗ ಗ್ರಾಹಕರು ನೀಡಿರುವ ಅರ್ಜಿಯಲ್ಲಿರುವ ಮಾಹಿತಿಯನ್ನು ಇದಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ಟ್ರಾಯ್ ಹೇಳಿದೆ.
ಟ್ರೂ ಕಾಲರ್‍ನಂತಹುಗಳು ಜನರಿಂದಲೇ ಮಾಹಿತಿ ಗಳಿಸಿ ಈ ಸೇವೆಯನ್ನು ಒದಗಿಸುತ್ತಿವೆ. ಆದರೆ ಸಿಮ್ ಖರೀದಿ ವೇಳೆ ಗ್ರಾಹಕರು ನೀಡಿರುವ ವಿವರವನ್ನೇ ಬಳಸಿಕೊಂಡಿರುವ ಕಾರಣಕ್ಕೆ ಕರೆ ಮಾಡಿದವರ ಹೆಸರು ನಿಖರವಾಗಿರುತ್ತೆ ಎಂಬ ಅಭಿಪ್ರಾಯವಿದೆ.