ಸಮಗ್ರ ನ್ಯೂಸ್: ಇಂದು ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಆರೋಪ ಮಾಡಿದ್ದು, ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಉದ್ಘೋಷದೊಂದಿಗೆ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಈಗಾಗಲೇ ಕಾಂಗ್ರೆಸ್ ಶಾಸಕರು, ಸಚಿವರು ಸೇರಿದಂತೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ದಿಲ್ಲಿ ಪೊಲೀಸರು ಅವಕಾಶ ನೀಡಿದ್ದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಗಳ ಕಾಲ ಅವಕಾಶ ನೀಡಲಾಗಿದೆ.
ಸಿಎಂ, ಡಿಸಿಎಂ ಸೇರಿದಂತೆ ಸಚಿವರು, ಶಾಸಕರು ಈಗಾಗಲೆ ದೆಹಲಿ ತಲುಪಿದ್ದಾರೆ, ಬೆಳಗ್ಗೆ 11 ಗಂಟೆಯಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡಲಿದ್ದಾರೆ. ಆದರೆ, ದೆಹಲಿ ಪೊಲೀಸರು ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಮಾತ್ರ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ದಾರೆ.
ಇನ್ನೂ ದೆಹಲಿಯಲ್ಲಿ ಮಾತನಾಡಿದ ಸಿಎಂ ನಮ್ಮದು ರಾಜಕೀಯ ಪ್ರತಿಭಟನೆಯಲ್ಲ, ರಾಜ್ಯಕ್ಕಾಗಿ ಪ್ರೊಟೆಸ್ಟ್. ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಲು ತಿಳಿಸಿದ್ದೇವೆ. ಬಿಜೆಪಿ ಜೆಡಿಎಸ್ ನಾಯಕರಿಗೂ ಮನವಿ ಮಾಡಿದ್ದೇವೆ. ಬಿಜೆಪಿಯವರು ಎಲ್ಲಾ ಕೊಟ್ಟಿರುವುದಾಗಿ ಹೇಳುತ್ತಾರೆ ಆದರೆ ಬಜೆಟ್ ನಲ್ಲಿ ಬರಬೇಕಾಗಿದ್ದು ಬಂದಿಲ್ಲ ಎಂದು ಕಿಡಿಕಾರಿದರು.