Ad Widget .

ಕುಮಾರ ಪರ್ವತ ಚಾರಣಕ್ಕೆ ನಿಷೇಧ ಯಾಕೆ? ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ಚಾರಣ ಮಾಡಬಹುದಾದ ಪ್ರಸಿದ್ಧ ಸ್ಥಳ ಕುಮಾರ ಪರ್ವತ ಚಾರಣಕ್ಕೆ ನಿರ್ಬಂಧ ಹೇರಿದ್ದೇಕೆ ಎಂಬ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.

Ad Widget . Ad Widget .

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರ ಪರ್ವತ ಚಾರಣಪಥದಲ್ಲಿ ಜನಜಂಗುಳಿಯಿಂದ ಪರಿಸರ ಹಾನಿ ಭೀತಿ ಎದುರಾಗಿದೆ. ಹೀಗಾಗಿ ಚಾರಣ ನಿಯಂತ್ರಣ ಸಂಬಂಧ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅದರ ಜೊತೆಗೆ ಚಾರಣಕ್ಕೆ ಆನ್ ಲೈನ್ ದಾಖಲಾತಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Ad Widget . Ad Widget .

ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಪಾರ ಹಾನಿಯಾಗುತ್ತಿದೆ. ಕರಾವಳಿ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಗುರಿ ಇದೆ. ರಾಜ್ಯದ ಎಲ್ಲಾ ಚಾರಣ ಪಥಗಳನ್ನು ಆನ್ ಲೈನ್ ದಾಖಲಾತಿ ವ್ಯಾಪ್ತಿಗೆ ತರುತ್ತೇವೆ. ಏಕಾಏಕಿ ಸಾವಿರಾರು ಜನ ಹೋದರೆ ಇಕ್ಕಟ್ಟಾಗಿ ಸಮಸ್ಯೆ ಆಗುತ್ತದೆ. ಕುಮಾರ ಪರ್ವತದಲ್ಲಿ ಅಂದಾಜು 20 ಕಿ.ಮೀ ಚಾರಣ ಇರಬಹುದು. ಇಂಥ ಜಾಗದಲ್ಲಿ ಎಷ್ಟು ಜನ ಹೋಗಬಹುದು ಅಂತ ನೋಡಿ ಆನ್ ಲೈನ್ ಮೂಲಕ ನಿಗದಿ ಮಾಡುತ್ತೇವೆ. ಮಿತಿ ಹಾಕಿ‌ ಚಾರಣಿಗರಿಗೆ ನಾವು ಪಾಸ್​​ಗಳನ್ನು ಕೊಡುತ್ತೇವೆ. ಅದನ್ನು ಮೀರಿ ಯಾರಿಗೂ‌ ಬರಲು ಅವಕಾಶ‌ ಇಲ್ಲ. ಚಾರಣ ನಿಯಂತ್ರಣವನ್ನು ಮಾಡಲೇ ಬೇಕಿದೆ, ಅದರ ಅಗತ್ಯ ಇದೆ.

ಕರಾವಳಿ ನಿಯಂತ್ರಣ ವಲಯದಲ್ಲಿ ಹಲವೆಡೆ‌ ಕಟ್ಟಡಗಳ ನಿರ್ಮಾಣ ಆಗಿದೆ. ಈ ಬಗ್ಗೆ‌ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಈ ಭಾಗದಲ್ಲಿ ಮೂರು ಎಕರೆಗಿಂತ ಕಡಿಮೆ ಬೇಸಾಯ ಮಾಡುವ ರೈತರಿದ್ದಾರೆ. ಅವರಿಗೆ‌ ತೊಂದರೆ ಆಗದ ರೀತಿಯಲ್ಲಿ ಅರಣ್ಯ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ. ಜೊತೆಗೆ‌ ಅರಣ್ಯ ಮತ್ತು‌ ಕಂದಾಯ ಇಲಾಖೆಯ ಜಂಟಿ ಸರ್ವೇ ಆಗಬೇಕಿದೆ. ಅಂಥ ಕಡೆ ಸರ್ವೇ ನಡೆಸಿ ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕುಮಾರ ಪರ್ವತ ಚಾರಣದಲ್ಲಿ ಕಳೆದ ತಿಂಗಳಾಂತ್ಯದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದ್ದು ಈ ಕುರಿತಂತೆ ಛಾಯಾಗ್ರಾಹಕ ಅನೂಪ್ ನರಿಯೂರು ಸಾಮಾಜಿಕ ಜಾಲತಾಣದಲ್ಲಿ ಗಮನಸೆಳೆದಿದ್ದರು. ‘ಸಮಗ್ರ ಸಮಾಚಾರ’ ಕೂಡಾ ಈ ಕುರಿತು ವರದಿ ಪ್ರಕಟಿಸಿತ್ತು.

Leave a Comment

Your email address will not be published. Required fields are marked *