ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಲಿಂಗ ಪರಿವರ್ತನೆ ಬಹಳ ಸಾಮಾನ್ಯವಾಗಿದೆ. ಆದರೆ ಕೇರಳದಲ್ಲಿ ಮಹಿಳೆಯೊಬ್ಬಳು ಲಿಂಗ ಪರಿವರ್ತನೆಗೂ ಮೊದಲು ತನ್ನ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟು, ಈಗ ತಂದೆಯಾಗಿದ್ದಾಳೆ.
ಫ್ರೀಝ್ ಮಾಡಿಟ್ಟ ಅಂಡಾಣು ಮತ್ತು ದಾನಿಯ ವೀರ್ಯದಿಂದ ಗಂಡು ಮಗುವೊಂದು ಜನಿಸಿದೆ. ಲಿಂಗಪರಿವರ್ತನೆಗೆ ಒಳಗಾದ ವ್ಯಕ್ತಿ ಕೋಝಿಕ್ಕೋಡ್ ಜಿಲ್ಲೆಯ ನಿವಾಸಿ. ಕೊಚ್ಚಿಯ ರೆನೈ ಮೆಡಿಸಿಟಿ ಆಸ್ಪತ್ರೆಯಲ್ಲಿ ಈ ಪವಾಡ ನಡೆದಿದೆ.
ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ತಮ್ಮ ಸಂರಕ್ಷಿತ ಅಂಡಾಣುವಿನಿಂದ ತಂದೆಯಾದ ಮೊದಲ ಪ್ರಕರಣ ಇದಾಗಿದೆ. ಡಾ.ವರ್ಗೀಸ್ ನೇತೃತ್ವದ ತಂಡ ಗರ್ಭಧಾರಣೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ.
2021ರಲ್ಲಿ ಈ ವ್ಯಕ್ತಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗಾಗಿ ರೆನೈ ಮೆಡಿಸಿಟಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದ. ದೈಹಿಕವಾಗಿ ಪುರುಷನಾಗಿ ಬದಲಾದ ಬಳಿಕ ಆತ ಕಾನೂನುಬದ್ಧವಾಗಿ ಮಹಿಳೆಯನ್ನು ವಿವಾಹವಾದ. ಬಳಿಕ ಈ ದಂಪತಿ ಸಂರಕ್ಷಿತ ಅಂಡಾಣುವಿನ ಸಹಾಯದಿಂದ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾರೆ. ವೈದ್ಯರು ಭ್ರೂಣ ಅಳವಡಿಕೆಯನ್ನು ಯಶಸ್ವಿಯಾಗಿ ಮಾಡಿದ ಬಳಿಕ ಪತ್ನಿ ಗರ್ಭಿಣಿಯಾದಳು. ಈ ಮಹಿಳೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿನ ತೂಕ 2.8 ಕೆಜಿಯಷ್ಟಿತ್ತು.
ಈ ಘಟನೆ ವೈದ್ಯಲೋಕಕ್ಕೇ ಅಚ್ಚರಿ ತಂದಿದೆ. ಅಷ್ಟೇ ಅಲ್ಲ ತಮ್ಮ ಡಿಎನ್‌ಎಯೊಂದಿಗೆ ಮಕ್ಕಳನ್ನು ಹೊಂದಲು ಬಯಸುವ ಅನೇಕ ತೃತೀಯಲಿಂಗಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.