ಸಮಗ್ರ ನ್ಯೂಸ್: ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದಲ್ಲಿನ ಒಂದು ಶಾಲೆಯ ಪ್ರಾಂಶುಪಾಲರು ಶಿಕ್ಷಣದ ಹೆಸರಿನಲ್ಲಿ ಅಮಾನವೀಯವಾಗಿ ವರ್ತಿಸಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಚೈನಾ ಮಾರ್ನಿಂಗ್ ಪೋಸ್ಟ್ ಇದನ್ನು ವರದಿ ಮಾಡಿದೆ. ಈ ಶಾಲೆಗೆ ಮಕ್ಕಳನ್ನು ಕಳುಹಿಸುವ ಪಾಲಕರಿಗೆ ಮಕ್ಕಳ ಮೇಲೆ ಯಾವ ಹಕ್ಕೂ ಇಲ್ಲವಾ ಎನ್ನುವ ಪ್ರಶ್ನೆ ಎದುರಾಗಿದೆ.
ಹೈನಾನ್ ಪ್ರಾಂತ್ಯದಲ್ಲಿರುವ ಶಾಲೆಗೆ ಹೋಗುವ ಒಬ್ಬ ಮಗುವಿಗೆ ವಿಪರೀತ ಹುಷಾರಿರಲಿಲ್ಲ. ಆರೋಗ್ಯ ಸರಿಯಾಗಿಲ್ಲದ ಕಾರಣ ಆ ಮಗು ಒಂದು ದಿನ ಶಾಲೆಯಲ್ಲಿ ಮೂರ್ಛೆ ತಪ್ಪಿ ಬಿದ್ದಿತ್ತು. ಮಗುವಿಗೆ ಹೀಗಾಗಿದ್ದಕ್ಕೆ ಮಾರನೇಯ ದಿನ ಆ ಮಗುವಿನ ಪಾಲಕರು ಮಗುವನ್ನು ಶಾಲೆಗೆ ಕಳುಹಿಸಲಿಲ್ಲ. ಶಾಲೆಯಲ್ಲಿ ಆ ಮಗು ಕಾಣದೇ ಇರುವುದನ್ನು ಗಮನಿಸಿದ ಶಾಲೆಯ ಪ್ರಾಂಶುಪಾಲರು ಸಿಟ್ಟಿನಲ್ಲಿ ಆ ಮಗುವಿನ ಮನೆಗೇ ಹೋಗಿದ್ದಾರೆ. ಈ ಸಮಯದಲ್ಲಿ ಮಗು ತನಗೆ ಏನೂ ಆಗಿಲ್ಲ ಅನ್ನುವ ಹಾಗೆ ಆಡುತ್ತಾ ಇತ್ತು. ಆರೋಗ್ಯ ಸರಿಯಾಗಿಲ್ಲ ಎಂದು ಸುಳ್ಳು ಹೇಳಿ ಶಾಲೆಗೆ ಬರದೇ ಮನೆಯಲ್ಲಿ ಆರಾಮವಾಗಿ ಆಟವಾಡಿಕೊಂಡು ಇರುವುದನ್ನು ಕಂಡು ಕೋಪಗೊಂಡ ಪ್ರಿನ್ಸಿಪಲ್ ಮಗುವಿನ ಪಾಲಕರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮಂತೆಯೇ ನಿಮ್ಮ ಮಗು ಕೂಡ ವ್ಯವಸಾಯ ಮಾಡಬೇಕೆಂದು ಬಯಸುತ್ತೀರಾ? ಎಂದು ಕೂಗಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ (Social Media) ಈ ಸುದ್ದಿ ವೈರಲ್ (Viral) ಆಗಿದೆ. ಆ ನಂತರ ಕೆಲವರು ಶಾಲೆಯ ಪ್ರಾಂಶುಪಾಲರಿಗೆ ಶಿಕ್ಷಣದ ಬಗ್ಗೆ ಹಾಗೂ ಮಗುವಿನ ಶಿಕ್ಷಣದ ಕುರಿತು ಇರುವ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ವಿದ್ಯೆಯ ಹೆಸರಿನಲ್ಲಿ ಪ್ರಾಂಶುಪಾಲರು ಪಾಲಕರ ಬಳಿ ಅಮಾನವೀಯವಾಗಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂಬುದಾಗಿಯೂ ಆರೋಪಿಸಿದ್ದಾರೆ.