Ad Widget .

“ ಒಂದು ಬೆಡ್‍ರೂಮ್ ಪ್ಲಾಟಿನ ಕಥೆ”

ಸಮಗ್ರ ನ್ಯೂಸ್: ಆತ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗ. ಕಡು ಬಡತನವಿದ್ದರೂ ಚೆನ್ನಾಗಿ ಓದಿ ಒಳ್ಳೆ ಮಾರ್ಕ್ ತೆಗೆದುಕೊಂಡು ಕಷ್ಟಪಟ್ಟು ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಂಡಿದ್ದ. ತಂದೆ ಹಳ್ಳಿಯ ಸರಕಾರಿ ಶಾಲೆಯ ಮೇಷ್ಟ್ರು. ಸರಕಾರಿ ಶಾಲೆಯಲ್ಲಿ ಪ್ರಾಮಾಣಿಕವಾಗಿ ದುಡಿಯುವ ಬಡ ಮೇಷ್ಟ್ರು. ಯಾವುದಕ್ಕೂ ಯಾರೆದುರೂ ಹಲ್ಲು ಗಿಂಜಿದವರಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂದು ವೃತ್ತಿಯನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಿ ಒಳ್ಳೆ ಹೆಸರುಗಳಿಸಿದ್ದರು. ಸರಕಾರಿ ಸಂಬಳದಿಂದ ಹೇಗೋ ಕುಟುಂಬ ನಿಭಾಯಿಸುತ್ತಿದ್ದರು. ಕಷ್ಟಪಟ್ಟು ತನ್ನ ದುಡಿಮೆಯ ಹಣವನ್ನು ಹೊಂದಿಸಿ ಮಗನ ಇಂಜಿನಿಯರಿಂಗ್ ಪೀಸು ಬರಿಸುತ್ತಿದ್ದರು. ಸರಕಾರಿ ಸಂಬಳದ ಹೊರತು ಇನ್ನೇನು ಆದಾಯವೂ ಇರಲಿಲ್ಲ. ಮೇಷ್ಟು ಪತ್ನಿಗೆ ಯಾವತ್ತೂ ಕೆಮ್ಮು, ದಮ್ಮು. ಮಗನ ಪೀಸು ಕಟ್ಟಿ ಉಳಿದ ಹಣ ತನ್ನ ಪತ್ನಿಗೆ ಮದ್ದಿಗೂ ಸಾಕಾಗುತ್ತಿರಲಿಲ್ಲ. ಆದರೆ ಮೇಷ್ಟು ಯಾರೊಂದಿಗೂ ಸಾಲ ಕೇಳುತ್ತಿರಲಿಲ್ಲ. ಅಕ್ಕಪಕ್ಕದ ಮನೆಯ ಮಕ್ಕಳಿಗೆ ಒಂದಷ್ಟು ಟ್ಯೂಷನ್ ಹೇಳಿ ಕುಟುಂಬದ ಖರ್ಚನ್ನು ಸರಿದೂಗಿಸುತ್ತಿದ್ದರು. ಹಾಗೂ ಹೀಗೂ ಮಗನ ವಿದ್ಯಾಭ್ಯಾಸ ಮುಗಿದು ಕ್ಯಾಂಪಸ್ ಸಂದರ್ಶನದಲ್ಲಿ ಮಗನಿಗೆ ಒಳ್ಳೆ ಕಂಪನಿಯಲ್ಲಿ ಉದ್ಯೋಗ ದೊರೆತಾಗ ಮೇಷ್ಟ್ರಿಗೆ ಆದ ಆನಂದಕ್ಕೆ ಪಾರವೇ ಇರಲಿಲ್ಲ. ಊರವರನೆಲ್ಲಾ ಕರೆದು ಊಟ ಹಾಕಿಸಿ ಸಂಭ್ರಮಿಸಿದ್ದರು. ಮೇಷ್ಟ್ರು ಅವರ ತಂದೆಗೆ ಎಂಟನೇ ಪುತ್ರ. ನಾಲ್ವರು ತಂಗಿಯಂದಿರು. ಹೀಗಾಗಿ ತಂಗಿಯಂದಿಯರಿಗೆ ಮದುವೆ ಮುಗಿದು ಕುಟುಂಬದ ಭಾರ ಇಳಿದ ಬಳಿಕವೇ ಮೇಷ್ಟ್ರಿಗೆ ಲೇಟಾಗಿ ಮದುವೆ ಆಗಿತ್ತು. ಮದುವೆಯಾಗಿ ಸುಮಾರು ವರ್ಷಗಳ ಬಳಿಕ ಮಗ ಹುಟ್ಟಿದಾಗಲಂತೂ ಮೇಷ್ಟ್ರು ಬಹಳ ಸಂಭ್ರಮಿಸಿದ್ದರು. ಊರು ಇಡೀ ಸಿಹಿ ಹಂಚಿ ಸಂಭ್ರಮಿಸಿದರು. ಮಗನ ಇಂಜಿನಿಯರಿಂಗ್ ಪದವಿ ಮುಗಿದು ಕೆಲಸ ದೊರೆತಾಗ ಮೇಷ್ಟ್ರಿಗೆ ನಿವೃತ್ತಿಯಾಗಲೂ ಮೂರುತಿಂಗಳು ಬಾಕಿ ಇತ್ತಷ್ಟೆ. ಮಗ ಬೆಂಗಳೂರಿನ ದೊಡ್ಡ ಕಂಪೆನಿಯಲ್ಲಿ ಕೆಲಸ ಸೇರಿದ್ದ. ಕೆಲಸ ಸೇರಿ 6 ತಿಂಗಳಲ್ಲಿ ಅಮೇರಿಕಾದಲ್ಲಿ ಕೆಲಸಕ್ಕಾಗಿ ಕಂಪೆನಿಯಿಂದಲೇ ಆದೇಶ ಬಂದಾಗ ಆತನ ಆನಂದಕ್ಕೆ ಪಾರವೇ ಇರಲಿಲ್ಲ. ಮೇಷ್ಟ್ರೀಗೂ ಸ್ವರ್ಗಕ್ಕೆ ಮೂರೇ ಗೇಣು. ಕಂಡ ಕಂಡವರಲ್ಲಿ ತನ್ನ ಮಗನ ಸಾಹಸವನ್ನು ಹೇಳಿ ಖುಷಿ ಪಟ್ಟಿದ್ದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಗ ಅಮೇರಿಕಾಕ್ಕೆ ಹೊರಟು ನಿಂತಾಗ ಹೆಮ್ಮೆಯಿಂದ ಆಶೀರ್ವದಿಸಿ ಕಳುಹಿಸಿಕೊಟ್ಟಿದ್ದರು ದಂಪತಿಗಳು.
ಮಗ ಅಮೇರಿಕಾ ಸೇರಿದ ಬಳಿಕ ಮೇಷ್ಟ್ರು ಊರಿನಲ್ಲಿದ್ದ ಮನೆ ಮತ್ತು ಸಣ್ಣ ಆಸ್ತಿಯನ್ನು ಮಾರಿ ಬೆಂಗಳೂರಿಗೆ ಬಂದರು. ನಿವೃತ್ತಿಯ ಸಮಯದಲ್ಲಿ ಸಿಕ್ಕಿದ್ದ ಪಿಂಚಣಿ ಹಣವೂ ಮೇಷ್ಟ್ರು ಮನೆಯ ಕನಸನ್ನು ನನಸಾಗಿಸುವಲ್ಲಿ ಹೆಚ್ಚಿನ ಸಹಾಯ ಮಾಡಿತ್ತು. ಇರುವ ಒಬ್ಬ ಮಗ ಆಮೇರಿಕಾ ಹೋದ ಬಳಿಕ ಊರಿನಲ್ಲಿ ಆದಾಯವಿಲ್ಲದೆ ಬದುಕುವುದು ಕಷ್ಟ ಎಂದು ಬೆಂಗಳೂರಿಗೆ ಬಂದು, ಒಂದಷ್ಟು ಮಕ್ಕಳಿಗೆ ಟ್ಯೂಷನ್ ಹೇಳಿ ಸಂಪಾದನೆ ಮಾಡಬಹುದು, ಬದುಕಿಗೆ ದಾರಿಯಾಗಬಹುದು ಎಂಬ ಆಸೆಯೂ ಮೇಷ್ಟ್ರಿಗೆ ಇತ್ತು. ಇದರ ಜೊತೆಗೆ ತನ್ನ ಸಹ ಧರ್ಮಿಣಿಯ ಪದೇ ಪದೇ ಹದಗೆಡುತ್ತಿದ್ದ ಆರೋಗ್ಯವೂ ಮೇಷ್ಟ್ರಿಗೆ ಬೆಂಗಳೂರಿಗೆ ಬರುವ ಆಸೆಗೆ ಪೂರಕವಾಗಿ ಕೆಲಸಮಾಡಿತ್ತು. ನಾಲ್ಕೈದು ವರ್ಷಗಳಲ್ಲಿ ಮಗ ಹೇಗಿದ್ದರೂ ಆಮೇರಿಕಾದಿಂದ ಬರಬಹುದು. ಹೇಗಿದ್ದರೂ ಹಳ್ಳಿಗೆ ಪುನಃ ಬರಲಿಕ್ಕಿಲ್ಲ ಎಂದೆಲ್ಲಾ ಆಲೋಚನೆ ಮಾಡಿ ಧೈರ್ಯ ಮಾಡಿ ಹಳ್ಳಿಯ ಆಸ್ತಿ ಪಾಸ್ತಿ ಮಾರಿ, ಗಂಟು ಮೂಟೆ ಕಟ್ಟಿ ಕೊಂಡು ಬೆಂಗಳೂರಿಗೆ ಬಂದಾಗಿತ್ತು. ತನ್ನ ಹಳೆ ವಿದ್ಯಾರ್ಥಿಯ ಸಹಾಯದಿಂದ ಬೆಂಗಳೂರಿನಲ್ಲಿ ಪುಟ್ಟ ಒಂದು ಬೆಡ್‍ರೂಮಿನ ಪ್ಲಾಟ್ ತೆಗೊಂಡಿದ್ದರು. ಸ್ವಂತ ಮನೆ ತಗೊಂಡಲ್ಲಿ ಭದ್ರತೆಗೆ ತೊಂದರೆಯಾದೀತು. ವಯಸ್ಸಾದ ದಂಪತಿಗಳಿಗೆ “ಪ್ಲಾಟ್’ನಲ್ಲಿ ಹೆಚ್ಚಿನ ಭದ್ರತೆ ಇರುತ್ತದೆ. ಎಂದು ‘ಮಗನೇ ಸಮಜಾಯಿಷಿ ನೀಡಿ ಮೇಷ್ಟ್ರ ಮನವೊಲಿಸಿದ್ದ. ಅಂತೂ ಇಂತೂ ಮೇಷ್ಟ್ರು ಜೀವನದ ಎರಡನೇ ಅಧ್ಯಾಯ ಬೆಂಗಳೂರಿನ ಮಹಾನಗರಿಯಲ್ಲಿ ಆರಂಭವಾಗಿತ್ತು.

Ad Widget . Ad Widget . Ad Widget .

ಇತ್ತ ಮೇಷ್ಟ್ರ ಮಗ ಅಮೇರಿಕಾ ತಲುಪಿದ್ದ. ಆತನ ಕನಸೂ ನನಸಾಗಿತ್ತು. ಹೊಸದೇಶ, ಹೊಸ ಊರು, ಯೌವನದ ಹುಮ್ಮಸ್ಸು. ನಾಲ್ಕೈದು ವರ್ಷ ಚೆನ್ನಾಗಿ ದುಡಿದು ಸಾಕಷ್ಟು ಸಂಪಾದಿಸಿ ಪುನಃ ಭಾರತಕ್ಕೆ ಬರುವುದೆಂದು ಆತ ಆಶಿಸಿದ್ದ. ತನ್ನ ತಂದೆಯವರು ಜೀವಮಾನವಿಡೀ ದುಡಿದು ಒಂದು ಬೆಡ್‍ರೂಮ್ ಪ್ಲಾಟ್ ತಗೊಂಡ ಬಗ್ಗೆ ಆತನಿಗೆ ಜಿಗುಪ್ಸೆಯೂ ಉಂಟಾಗಿತ್ತು. ತಾನೂ ಚೆನ್ನಾಗಿ ದುಡಿದು ಸಂಪಾದಿಸಿ ದೊಡ್ಡ ಮನೆ ಖರೀದಿಸಬೇಕೆಂಬ ಆಸೆ ಮನದಲ್ಲಿ ಅಗಲೇ ಮೂಡಿತ್ತು. ತನ್ನ ತಂದೆಯು ಸಾಧಿಸಿದಕ್ಕಿಂತ ಹೆಚ್ಚು ಸಾಧಿಸಬೇಕೆಂಬ ಛಲವೂ ಮೂಡಿತ್ತು ಆದರೆ ವಿಪರೀತ ಪೈಪೋಟಿಯ ಕಾಲ ಆದಾಗಿತ್ತು. ಎಷ್ಟು ದುಡಿದರೂ ಮೇಲಾಧಿಕಾರಿಗೆ ಸಮಾಧಾನವಿರುತ್ತಿದಲ್ಲಿ ದಿನಕ್ಕೆ 12 ರಿಂದ 16 ಗಂಟೆ ಕೆಲಸ ಮಾಡುತ್ತಿದ್ದ ಮೇಲಾಧಿಕಾರಿ ನೀಡಿದ ಟಾರ್ಗೆಟ್ ತಲುಪಲು ಮನೆಗೆ ಬಂದ ಬಳಿಕವೂ ಕೆಲಸದಲ್ಲೇ ತೊಡಗುತ್ತಿದ್ದ. ದಿನ ಉರುಳುತ್ತಿತ್ತು. ಆತನಿಗೆ ಅಪ್ಪ –ಅಮ್ಮನ ನೆನಪೂ ಕಾಡತೊಡಗಿತ್ತು. ಕೆಲಸ ಬಿಟ್ಟು ಊರಿಗೆ ಬಂದರೆ ಪುನಃ ಕೆಲಸ ಸಿಗದಿದ್ದರೆ ಎಂದು ಕಾಡುತ್ತಿತ್ತು. ಮನೆಯ ನೆನಪಾದಾಗಲೆಲ್ಲಾ ಅಮ್ಮನ ಬಳಿ ಮಾತಾಡುತ್ತಿದ್ದ ಮೊದಮೊದಲು ವಾರಕ್ಕೆರಡು ಬಾರಿ, ಕ್ರಮೇಣ 15 ದಿನಕ್ಕೊಮ್ಮೆ ಮಾಡುತ್ತಿದ್ದ. ಕಡಿಮೆ ಧರದ ಅಂತಾರಾಷ್ಟ್ರೀಯ ಪೋನ್‍ಕಾರ್ಡ್ ಬಳಸಿ ಫೋನು ಮಾಡಿ ಹಣ ಉಳಿಸಲು ಯತ್ನಿಸುತ್ತಿದ್ದ. ಎರಡು ವರ್ಷಉರುಳಿತ್ತು. ಎರಡು ವರ್ಷ ಬರ್ಗರ್, ಫಿಜ್ಜಾ ತಿಂದು ಕೋಕ್‍ಪೆಪ್ಸಿ ಕುಡಿದು ನಾಲಿಗೆ ಬಡ್ಡುಗಟ್ಟಿತು. ಡಿಸ್ಕೋತೆಕ್ ಮತ್ತು ಪಬ್‍ಗಳ ಆಕರ್ಷಣೆಯೂ ಕಡಿಮೆಯಾಗಿತ್ತು. ದಿನವೂ ಏರುತ್ತಿದ್ದ ಡಾಲರ್ ರೇಟು ಮತ್ತು ಕುಸಿಯುವ ರೂಪಾಯಿ ಮೌಲ್ಯ ನೋಡಿ ಖುಷಿ ಪಡುತ್ತಿದ್ದ ಊರಿಗೆ ಹೋಗಲೇಬೇಕೆಂಬ ಹಂಬಲ ಜಾಸ್ತಿಯಾಗ ತೊಡಗಿದಾಗ 3 ತಿಂಗಳ ಮೊದಲೇ ಕಡಿಮೆ ದರದ ವಿಮಾನ ಟಿಕೇಟು ಖರೀದಿಸಿ ಹಣ ಉಳಿಸಿದ ಬಗ್ಗೆ ತನ್ನ ಬಗ್ಗೆನೇ ಹೆಮ್ಮೆ ಪಟ್ಟುಕೊಂಡಿದ್ದ. ಇತ್ತ ಊರಲ್ಲಿ ಮೇಷ್ಟ್ರು ದಂಪತಿಗೆ ಸ್ವರ್ಗಕ್ಕೆ ಮೂರೇ ಗೇಣು. ಅಪಾರ್ಟ್ ಮೆಂಟಿನ ಎಲ್ಲರನ್ನೂ ಕರೆಸಿ ಸತ್ಯನಾರಾಯಣ ಪೂಜೆಗೂ ವ್ಯವಸ್ಥೆ ಮಾಡಿದ್ದರು. ಮಗ ಬರುವ ಸಂಭ್ರಮದಲ್ಲಿ ಮೇಷ್ಟ್ರು ದಂಪತಿಗಳು ಎಲ್ಲವನ್ನೂ ಮರೆತಿದ್ದರು.

ಬೆಂಗಳೂರಿನ ಒಣ ಹವೆ ಮತ್ತು ತಂಪು ವಾತಾವರಣದಿಂದ ಮೇಷ್ಟ್ರ ಮಡದಿಯ ಆರೋಗ್ಯ ದಿನೇ ದಿನೇ ಹದಗೆಟ್ಟಿತ್ತು. ಮಗ ಬಂದಾಗ ತನ್ನ ದೂರದ ಸಂಬಂಧಿಯ ಮಗಳನ್ನು ತೋರಿಸಿ ಮದುವೆ ನಿಶ್ಚಿತಾರ್ಥ ಮಾಡಬೇಕೆಂದು ಮೇಷ್ಟ್ರ ಮಡದಿ ಗುಟ್ಟಾಗಿ ಮೇಷ್ಟ್ರಲ್ಲಿ ಪ್ರಸ್ತಾಪ ಮಾಡಿದಾಗ ಮೇಷ್ಟ್ರು ಮೆಲ್ಲಗೆ ಗದರಿಸಿ ಸುಮ್ಮನಾಗಿದ್ದರು.

ಇತ್ತ ಮಗ ತನ್ನ ಕೆಲಸದ ಒತ್ತಡದಿಂದಾಗಿ ತನ್ನ ಮೇಲಾಧಿಕಾರಿಯ ಆದೇಶದ ಮೇರೆಗೆ ಒಂದು ತಿಂಗಳ ರಜೆಯನ್ನು 15 ದಿನಕ್ಕೆ ಕುಂಟಿತಗೊಳಿಸಿದ್ದ. ಮಗ ಬಂದು ಎರಡು ದಿನ ಜಟ್‍ಲ್ಯಾಗ್ ಎಂದು ಮಲಗಿಯೇ ಇದ್ದ. ಕಣ್ಣು ಮಿಸುಕುವುದರೊಳಗೆ 10 ದಿನ ಮುಗಿದಿತ್ತು. ರಾತ್ರಿ ಇಡೀ ಕಂಪ್ಯೂಟರ್ ಮುಂದೆ ಕುಳಿತು ಕಂಪೆನಿಯ ವ್ಯವಹಾರ ಮಾಡುತ್ತಿದ್ದ. ಮಗ ಒಲ್ಲದ ಮನಸ್ಸಿನಿಂದ ಆಮೇರಿಕಾಕ್ಕೆ ಹೊರಟು ನಿಂತ. ಮೇಷ್ಟ್ರು ದಂಪತಿಗಳು ಕಣ್ಣೀರಿಡುತ್ತಲೇ ಮಗನನ್ನು ಪುನಃ ಕಳಿಸಿಕೊಟ್ಟಿದರು. ಮೇಷ್ಟ್ರ ಮಡದಿಯ ಮದುವೆ ಪ್ರಸ್ತಾಪ ಅಲ್ಲಿಗೆ ನಿಂತಿತ್ತು.

ಆತ ಆಮೇರಿಕಾದ ಪುನಃ ಸೇರಿದ್ದ. ದಿನಕ್ಕೆ 16 ಗಂಟೆಗಳ ದುಡಿತ. ಯಾವತ್ತೂ ಆಫೀಸಿನದ್ದೇ ಧ್ಯಾನ. ದಿನ ಉರುಳುತ್ತಿತ್ತು. ಎರಡು ಮೂರು ವರ್ಷ ಪುನಃ ಕಳೆದಿತ್ತು. ತಿಂಗಳಿಗೊಮ್ಮೆ ಅಮ್ಮನ ಜೊತೆ ಮಾತಾಡುತ್ತಿದ್ದ. ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗಲು ನಿರ್ಧರಿಸಿದ್ದ. ಕೆಲಸದ ಒತ್ತಡ ಜಾಸ್ತಿಯಾಗುತ್ತಲೇ ಇತ್ತು ಕೊನೆಗೂ ಮದುವೆಗೆಂದು 10 ದಿನಗಳ ರಜೆ ಗಿಟ್ಟಿಸಿದಾಗ ಯುದ್ಧಗೆದ್ದಷ್ಟೇ ಸಂತಸವಾಗಿತ್ತು. ಕಡಿಮೆ ದರದ ವಿಮಾನ ಟಿಕೇಟ್ ಮಾಡಿ ಹಣ ಉಳಿಸಿದ ಬಗ್ಗೆ ಮತ್ತೊಮ್ಮೆ ಹೆಮ್ಮೆ ಪಟ್ಟುಕೊಂಡ. ತನ್ನ ಹಳೆ ಮಿತ್ರರಿಗೆಲ್ಲಾ ಮತ್ತು ಬಂಧುಗಳಿಗೆಲ್ಲಾ ತರತರದ ಉಡುಗೊರೆ ತಗೊಂಡಿದ್ದ.

ಎಲ್ಲರನ್ನೂ ಪಟ್ಟಿಮಾಡಿ ಯಾರನ್ನು ಬಿಡದೆ ಉಡುಗೊರೆ ತಂದಿದ್ದ. ಒಂದು ವಾರದಲ್ಲಿ ನೂರಾರು ಹುಡುಗಿಯರ ಪೋಟೋ ನೋಡಿ ಒಂದಿಬ್ಬರನ್ನು ಇಷ್ಟಪಟ್ಟಿದ್ದ. ಅಮ್ಮನ ಸಂಬಂಧಿಕರ ಮಗಳು ಅವಾಗಲೇ ಕಾದುಕಾದು ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದಳು. ಮೇಷ್ಟ್ರ ಮಡದಿಗೆ ಅದರ ನೋವು ಇನ್ನೂ ಮಾಸಿರಲಿಲ್ಲ. ಒಬ್ಬಳನ್ನು ಇಷ್ಟಪಟ್ಟು ಆ ಹುಡುಗಿಯ ತಂದೆ ಬಳಿ ಎರಡು ವರ್ಷದ ಬಳಿಕ ಮದುವೆ ಎಂದಾಗ ಸುತರಾಂ ಒಪ್ಪಲಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಮತ್ತೆ ಮೂರು ನಾಲ್ಕು ದಿನಗಳಲ್ಲಿ ಮದುವೆಯ ಶಾಸ್ತ್ರ ಮುಗಿಸಿದ್ದ ಭಾವಿ ಅತ್ತೆ ಮಾವಂದಿರ ಒತ್ತಾಯದಿಂದ ಮೂರುದಿನಗಳಲ್ಲಿ ಎಲ್ಲವೂ ಮುಗಿದಿತ್ತು. ಮೇಷ್ಟ್ರು ಮತ್ತು ಮಡದಿ ಎಲ್ಲವನ್ನು ಅವುಡುಗಚ್ಚಿ ಸಹಿಸಿಕೊಂಡರು. ತಂದ ಹಣವೆಲ್ಲಾ ಕರಗಿತ್ತು. ಸರಳವಾಗಿ ಮದುವೆ ನಡೆದಿದ್ದರೂ ಚಿನ್ನಾಭರಣಕ್ಕೆ ಹಣ ಕರಗಿ ಹೋಗಿತ್ತು. ಉಳಿದ ಹಣವನ್ನು ಅಮ್ಮನ ಮಡಿಲಿಗೆ ತುಂಬಿ ಪಕ್ಕದ ಪ್ಲಾಟಿನವರಲ್ಲಿ ಅಮ್ಮ ಅಪ್ಪನನ್ನು ಚೆನ್ನಾಗಿ ನೋಡಿ ಕೊಳ್ಳಿ ಎಂದು ಹೇಳಿ ಆತ ವಿಮಾನ ಏರಿದ್ದ. ಪುನಃ ತನ್ನದಲ್ಲದ ಊರಿಗೆ, ಒಲ್ಲದ ಮನಸ್ಸಿನಿಂದ ಆತ ಹೊರಟಿದ್ದ. ಆತನ ಹೊಸ ಪತ್ನಿ ಆಮೇರಿಕಾಕ್ಕೆ ಬಂದಾಗ ಬಹಳ ಸಂಭ್ರಮಿಸಿದ್ದಳು. ಎರಡೇ ತಿಂಗಳಲ್ಲಿ ಅವಳ ಎಲ್ಲ ಸಂಭ್ರಮ ಇಳಿದಿತ್ತು. ಆಕೆ ವಾರದಲ್ಲಿ ಆರು ದಿನವೂ ಅವಳ ಅಮ್ಮನ ಜೊತೆ ಹರಟುತ್ತಿದ್ದಳು. ಗಂಡನ ಬಳಿ ಹೇಳಿಕೊಳ್ಳಲು ಸಮಯವೇ ಇರಲಿಲ್ಲ. ಆತ ಯಾವತ್ತೂ ಕೆಲಸದ ಮಧ್ಯೆ ಕಂಪ್ಯೂಟರ್ ನಡುವೆ ಕಳೆದು ಹೋಗಿದ್ದ. ಆಕೆಗೆ ಏಕಾಂಗಿತನ ಕಾಡುತ್ತಿತ್ತು. 4 ವರ್ಷ ಕಳೆಯಿತು ಎರಡು ಮಕ್ಕಳಾದವು. ಒಂದು ಗಂಡು ಮತ್ತು ಹೆಣ್ಣು. ಖರ್ಚು ವೆಚ್ಚ ದ್ವಿಗುಣವಾಯಿತು. ಊರಿನಿಂದ ಅಜ್ಜ–ಅಜ್ಜಿಯರು ಮೊಮ್ಮಕ್ಕಳನ್ನು ಕಾಣಬೇಕೆಂದು ಹಟ ಹಿಡಿದರೂ ಊರಿಗೆ ಬರಲು ಆರ್ಥಿಕ ಅಡಚಣೆ ಮತ್ತು ಕೆಲಸದ ಒತ್ತಡವೂ ಕೈ ಬಿಡಲಿಲ್ಲ. ಪ್ರತಿ ವರ್ಷವೂ ಊರಿಗೆ ಹೋಗುವ ಆಸೆಯನ್ನು ಮುಂದೂಡುತ್ತಿದ್ದ ಈ ನಡುವೆ ಊರಿನಲ್ಲಿ ಮೇಷ್ಟ್ರ ಆರೋಗ್ಯ ಹದಗೆಟ್ಟಿತ್ತು. ಕೆಲಸದ ಒತ್ತಡದಿಂದ ಆತ ಊರಿಗೆ ಹೋಗುವ ಆಸೆಯನ್ನು ಮುಂದೂಡುತ್ತಲೇ ಬಂದ. ಅದೊಂದು ದಿನ ಊರಿನಿಂದ ಮೇಷ್ಟ್ರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೊದಗಿದಾಗಲೂ ಆತ ನಿರ್ಲಪ್ತಿನಾಗಿದ್ದ. ಮೇಲಾಧಿಕಾರಿಯ ಮುಂದೆ ರಜೆ ಕೇಳಲೂ ಆತ ಭಯಪಟ್ಟಿದ್ದ. ಆರ್ಥಿಕ ಸ್ಥಿತಿ ಚೆನ್ನಾಗಿರಲೂ ಇಲ್ಲ. ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನೂ ಕರಗಿಸಿಬಿಟ್ಟಿತ್ತು. ಅಪ್ಪನ ಪ್ಲಾಟಿನ ಮೆಂಬರ್‍ಗಳ ಬಳಿ ಅಂತ್ಯಕ್ರಿಯೆ ನೆರವೇರಿಸಲು ಗಟ್ಟಿ ಮನಸ್ಸು ಮಾಡಿ ಹೇಳಿದ್ದ. ಅವರು ಅಕೌಂಟಿಗೆ 50,000 ಜಮಾ ಮಾಡಿ ತನ್ನ ತಲೆಭಾರ ಇಳಿಯಿತು ಎಂದು ಸಮಾಧಾನ ಪಟ್ಟು ಕೊಂಡಿದ್ದ. ಮೇಷ್ಟ್ರು ಸತ್ತು ಒಂದೇ ವಾರಕ್ಕೆ ಮೇಷ್ಟ್ರ ಮಡದಿಯೂ ಅನಾಥೆಯಂತೆ ಇಹಲೋಕ ತ್ಯಜಿಸಿದ್ದರು. ಮತ್ತದೇ ಹಣ ಖಾತೆಗೆ ಜಮಾ ಮಾಡಿ ಜವಾಬ್ದಾರಿಯಿಂದ ಮಣುಚಿಕೊಂಡಿದ್ದ.

ಇತ್ತ ಮತ್ತೆರಡು ವರ್ಷ ಕಳೆದಾಗ ಆತನಿಗೆ ತನ್ನ ಕೆಲಸದ ಬಗ್ಗೆ ಜಿಗುಪ್ಸೆ ಹುಟ್ಟಿತು. ಹೆಂಡತಿ ಮಕ್ಕಳ ಜೊತೆ ಭಾರತಕ್ಕೆ ಬಂದು ಇಲ್ಲೇ ಜಾಗ ತೆಗೆದು ಮನೆಕಟ್ಟಿ ಇರೋಣ ಎಂದು ಇಚ್ಚಿಸಿದ್ದ. ಆದರೆ ಮಕ್ಕಳು ಒಪ್ಪಲಿಲ್ಲ. ವಿಧಿಯಿಲ್ಲದೆ ಪುನಃ ಅಮೇರಿಕಾಕ್ಕೆ ಹೊರಟು ನಿಂತ. ಭಾರತದಲ್ಲಿ ಮನೆ ಕಟ್ಟಲು, ಜಾಗ ತೆಗೆಯಲು ಬೆಂಗಳೂರಲ್ಲಿ ಜಾಗದ ಬೆಲೆ ವಿಪರೀತವಾಗಿತ್ತು. ಮುಂದಿನ ಬಾರಿಯಾದರೂ ಹಣ ಉಳಿಸಿ ತೆಗೆಯ ಬೇಕೆಂದು ನಿರ್ಧರಿಸಿ ಗಟ್ಟಿ ಮನಸ್ಸು ಮಾಡಿ ಅಮೇರಿಕಾಕ್ಕೆ ಹೊರಟು ನಿಂತಿದ್ದ. ಆತನ ಪತ್ನಿ ಮಾತ್ರ ಭಾರತದಲ್ಲಿ ಉಳಿದಿದ್ದಳು. ಮಕ್ಕಳು ನಿಲ್ಲಲು ಒಪ್ಪಲಿಲ್ಲ. ಎರಡು ವರ್ಷ ಕಳೆದು ಊರಿಗೆ ಮರಳುವ ಆಶ್ವಾಸನೆ ಪತ್ನಿಗೆ ನೀಡಿ ಆತ ಹೊರಡಿದ್ದ. ದಿನ ಉರುಳುತ್ತಿತ್ತು. ಮಗಳು ತನ್ನ ಸಹದ್ಯೋಗಿ ಅಮೇರಿಕನ್ ಸ್ನೇಹಿತನ ಜೊತೆ ಮದುವೆಗೆ ಮೊದಲೇ ಜೀವಿಸಲಾರಂಭಿಸಿದಾಗ ಮಾನವಾಗಿ ಸಮ್ಮತಿಸಿದ. ಮದುವೆಯ ಖರ್ಚು ಯಾಕೆ ಎಂದು ಮಗಳು ಹೇಳಿದಾಗ ಅದೂ ಸರಿ, ಎಂದು ಸುಮ್ಮನಾದ. ಇತ್ತ ಮಗ ತನ್ನ ಬಾಲ್ಯದ ಗೆಳೆಯನೊಂದಿಗೆ ಖುಷಿಯಾಗಿಯೇ ಇದ್ದ. ಆತನ ಗೆಳೆಯ ಅಮೇರಿಕನ್ ಆಗಿರದಿದ್ದರೂ ಆತನಿಗೆ ಯಾಕೋ ಪುರುಷರ ಬಗ್ಗೆ ವಿಶೇಷ ಆಸಕ್ತಿ ಮತ್ತು ಮಹಿಳೆಯರ ಬಗ್ಗೆ ಜಿಗುಪ್ಸೆ ಇತ್ತು. ಆತನನು ಸರಿ ದಾರಿಗೆ ತರಲು ಪ್ರಯತ್ನಿಸಿದ. ಆದರೆ ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಗಿತ್ತು. ಇನ್ನಾವ ಪುರುಷಾರ್ಥಕ್ಕೆ ಅಮೇರಿಕಾ ಸಹವಾಸ ಎಂದು ತನ್ನೆಲ್ಲಾ ಕಾರು, ಮನೆ, ಮಠ ಮಾರಾಟಮಾಡಿ ಭಾರತಕ್ಕೆ ಹೊರಟು ನಿಂತಾಗ ಅಪ್ಪ ಅಮ್ಮನ ನೆನಪು ಕಾಡದೆ ಇರಲಿಲ್ಲ. ನೋವು ಹಂಚಿಕೊಳ್ಳಲಂತೂ ಜೊತೆಯಲ್ಲಿ ಯಾರೂ ಇರಲಿಲ್ಲ.

ಆತನಿಗೆ ಈಗ 60 ವಯಸ್ಸು. ಭಾರತಕ್ಕೆ ಬಂದಾಗ ಎಲ್ಲಾ ಹಣವನ್ನು ಸೇರಿಸಿ ಎರಡು ಬೆಡ್‍ರೂಮ್ ಪ್ಲಾಟ್ ಖರೀದಿಸಿದ್ದ. ಅದೂ ಕೂಡಾ ಬೆಂಗಳೂರಿನ ತುಂಬಾ ಪ್ರತಿಷ್ಠಿತ ಬಡಾವಣೆಯಾದ ಇಂದಿರಾ ನಗರದಲ್ಲಿ. ಜೊತೆಗೊಂದು ದುಬಾರಿ ನಾಯಿ ಮಾತ್ರ ಸಂಗಾತಿ. ದಿನಾ ಬೆಳಗ್ಗೆ ವಾಕಿಂಗ್ ನಾಯಿಯ ಜೊತೆಗೂಡಿ ಹೋಗುತ್ತಾನೆ. ಹತ್ತಿರದ ದೇವಸ್ಥಾನಕ್ಕೆ ಹೋಗಿ ಒಂದಷ್ಟು ಹೊತ್ತು ಕುಳಿತು ಮನಸ್ಸಿಗೆ ನೆಮ್ಮದಿಯಾಗಲೆಂದು ವಿಷ್ಣು ಸಹಸ್ರನಾಮ ಮತ್ತು ಪುರುಷಸೂಕ್ತ ಹೇಳುತ್ತಾನೆ. ಮೇಷ್ಟ್ರು ತಾನು ಚಿಕ್ಕವನಾಗಿದ್ದಾಗ ಉಳಿದ ಮಕ್ಕಳ ಜೊತೆಗೆ ಹೇಳಿಕೊಟ್ಟು ಕಂಠಪಾಠ ಮಾಡಿಸುತ್ತಿದ್ದ ಪುರುಷಸೂಕ್ತ ಮತ್ತು ವಿಷ್ಣು ಸಹಸ್ರನಾಮ ಇಳಿ ವಯಸ್ಸಲ್ಲಿ ಆತನಿಗೆ ಮನಶಾಂತಿ ನೀಡಿದಂತೂ ಸತ್ಯ. ಮಧ್ಯಾಹ್ನದ ಊಟ ಅಲ್ಲೇ ದೇವಸ್ಥಾನದಲ್ಲಿಯೇ ಉಚಿತವಾಗಿ ಆಗುತ್ತಿತ್ತು. ಆತನಿಗೆ ಎರಡು ಬೆಡ್‍ರೂಮ್ ಪ್ಲಾಟ್ ಇದ್ದರೂ, ಪತ್ನಿ ಮಾತ್ರ ಎರಡು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಳು. ಆಕಾರಣದಿಂದ ಒಂದು ರೂಂ ಯಾವತ್ತೂ ಖಾಲಿಯಾಗಿಯೇ ಇರುತ್ತಿತ್ತು. ಆದರೆ ರೂಮಿನ ಗೋಡೆಯಲ್ಲಿ ಮೇಷ್ಟ್ರು ಮತ್ತು ಮೇಷ್ಟ್ರ ಮಡದಿಯ ಹಳೆ ಕಪ್ಪು ಬಿಳುಪಿನ ಪೋಟೋ ಮಾತ್ರ ಆತನನ್ನು ನೋಡಿ ನಗುವಂತೆ ಭಾಸವಾಗುತ್ತಿತ್ತು.
ಆತ ಯೋಚಿಸುತ್ತಿದ್ದ ತನ್ನ ತಂದೆ ಜೀವಮಾನವಿಡೀ ದುಡಿದು ಒಂದು ಬೆಡ್‍ರೂಂ ಪ್ಲಾಟ್ ಕಷ್ಟಪಟ್ಟು ಖರೀದಿಸಿದ್ದರು. ಆದರೆ ಮೇಷ್ಟ್ರು ಸಾವಿರಾರು ಶಿಷ್ಯರು ದೇಶ ವಿದೇಶಗಳಲ್ಲಿ ದುಡಿದು ತಮ್ಮ ಮನೆ ಮನಗಳಲ್ಲಿ ಮೇಷ್ಟ್ರನ್ನು ತುಂಬಿಸಿಕೊಂಡ ಸತ್ಯ ಆತನಿಗೆ ಗೋಚರವಾದಗ ಬಹಳ ತಡವಾಗಿತ್ತು. ಆದರೆ ತನಗೆ ದಕ್ಕಿದು ಎರಡು ಬೆಡ್‍ರೂಮಿನ ಪ್ಲಾಟ್. ಈ ಒಂದು ಹೆಚ್ಚು ಬೆಡ್‍ರೂಮಿನ ಮನೆಗಾಗಿ ತಾನು ತನ್ನ ಹೆತ್ತವರು ಮಕ್ಕಳು ಪತ್ನಿ ಎಲ್ಲವನ್ನೂ ಕಳಕೊಂಡಿದ್ದ. ಆತ ತನ್ನ ಎರಡು ಬೆಡ್ ರೂಮ್ ಮನೆಯ ಕಿಟಕಿಯಿಂದ ಹೊರಗಿನ ಮೈದಾನವನ್ನು ದಿಟ್ಟಿಸಿ ನೊಡುತ್ತಿದ್ದ. ಖಾಲಿಯಾದ ಮೈದಾನದಲ್ಲಿ ಯಾರೊಬ್ಬರ ಮಕ್ಕಳೂ ಆಡುತ್ತಿರಲಿಲ್ಲ. ಎಲ್ಲ ಮಕ್ಕಳು ತಮ್ಮ ತಮ್ಮ ಮನೆಯಲ್ಲಿ ಮೊಬೈಲ್ ಕಂಪ್ಯೂಟರ್‍ಗಳಲ್ಲಿ ಆಟದಲ್ಲಿ ಮುಳುಗಿದ್ದರು. ಆತನಿಗೆ ಅನಿಸಿತ್ತು, ಈ ಮೊಬೈಲ್ ಕಂಪ್ಯೂಟರ್ ಅಂತರ್ಜಾಲದಿಂದಾಗಿ ನಮ್ಮ ಮಕ್ಕಳು ಸಂಸ್ಕಾರ ಮತ್ತು ಸಂಸ್ಕಕ್ತಿಯನ್ನು ಕಳೆಯುತ್ತಿದ್ದಾರೆ ಎಂದು ತನ್ನೊಳಗೆ ಅಂದುಕೊಂಡಿದ್ದ. ಆದಾಗಲೇ ಮನೆಯಲ್ಲಿನ ಪೋನ್ ರಿಂಗಾಯಿತು. ದೂರದ ಅಮೇರಿಕಾದಿಂದ ಮಗಳು ಪೋನ್‍ಮಾಡಿ ತನ್ನ ಹೊಸ ಯುರೋಪಿಯನ್ ಗೆಳೆಯನ ಬಗ್ಗೆ ಹೇಳುತ್ತಿದ್ದಳು. ಆತ ಕುಳಿತಲ್ಲೆ ಕುಸಿದಿದ್ದ. ಆತ ತನ್ನನ್ನೇ ಕೇಳಿಕೊಂಡಿದ್ದ, ಒಂದು ಎಕ್ಟ್ರಾ ಬೆಡ್‍ರೂಂಗಾಗಿ ತಾವು ಕಳೆದುಕೊಂಡ ಅಪ್ಪ ಅಮ್ಮ ಮಕ್ಕಳು ಪತ್ನಿ ಎಲ್ಲರನ್ನೂ ನೆನೆಯುತ್ತಲೇ ಇದ್ದ. ಆದರೆ ಆತನನ್ನು ಸಂತೈಸುವವರು ಯಾರು ಇರಲಿಲ್ಲ. ಆತನ ಮುದ್ದಿನ ನಾಯಿ ಮಾತ್ರ ಬಾಲ ಅಲ್ಲಾಡಿಸುತ್ತಾ ಆತನ ಕಾಲ ಬುಡದಲ್ಲಿ ಬೆಚ್ಚಗೆ ಮಲಗಿತ್ತು. ಬರಲಿರುವ ನಾಳೆಗಳ ಬಗ್ಗೆ ಯೋಚಿಸಿ ಆತ ಕುಳಿತಲ್ಲೇ ಬೆವರುತ್ತಿದ್ದ. ಮರುದಿನವೇ ಬ್ಯಾಂಕಿಗೆ ಹೋಗಿ ಸೊಸ್ಶೆಟಿಯ ಅಕೌಂಟಿಗೆ 50,000 ಜಮಾ ಮಾಡಿ ಷೋಡಷ ಸಂಸ್ಕಾರಗಳಲ್ಲಿ ಕೊನೆಯ ಸಂಸ್ಕಾರವಾದ ತನ್ನದೇ ಅಪರ ಕ್ರಿಯೆಯ(ವೈಕುಂಠ ಸಮಾರಾಧನೆ) ಬಗ್ಗೆ ವ್ಯವಸ್ಥೆಯನ್ನೂ ಮಾಡಿ ನಿಟ್ಟುಸಿರು ಬಿಟ್ಟಿದ್ದ. ಗೋಡೆಯಲ್ಲಿ ತೂಗು ಹಾಕಿದ್ದ ಮೇಷ್ಟ್ರು ದಂಪತಿಗಳ ಚಿತ್ರ ನೋಡುವ ಧೈರ್ಯವೂ ಆತನಿಗೆ ಇರಲಿಲ್ಲ.

ಡಾ|| ಮುರಲೀ ಮೋಹನ್ ಚೂಂತಾರು
BDS,MDS,DNB,MBA,
MOSRCSEd(UK)
Consultant Oral and Maxillofacial Surgeon
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ :09845135787
www.surakshadental.com

Leave a Comment

Your email address will not be published. Required fields are marked *