ಸಮಗ್ರ ನ್ಯೂಸ್: ಆರು ವರ್ಷದ ಬಾಲಕಿಯನ್ನು ಅಪಹರಿಸಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಕೇರಳದ ಉದ್ಯಮಿ, ಆತನ ಪತ್ನಿ ಹಾಗೂ ಮಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿ ಪದ್ಮಕುಮಾರ್, ಆತನ ಪತ್ನಿ ಅನಿತಾ ಕುಮಾರಿ ಮತ್ತು ಯೂಟ್ಯೂಬರ್ ಆದ ಅನುಪಮಾ ಪದ್ಮನ್‍ಳನ್ನು ಬಂಧಿಸಲಾಗಿದೆ. ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಆರೋಪಿಗಳಲ್ಲಿ ಒಬ್ಬನ ಧ್ವನಿಯನ್ನು ಗುರುತಿಸಿ ನಾಗರಿಕರು ನೀಡಿದ ಮಾಹಿತಿ ಆರೋಪಿಗಳ ಬಂಧನಕ್ಕೆ ಬಹಳ ಸಹಾಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ಬಾಲಕಿಯ ಹಾಗೂ ಪದ್ಮಕುಮಾರ್ ಭಾವಚಿತ್ರದ ಸಹಾಯದಿಂದ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಕುಟುಂಬದ ಆರ್ಥಿಕ ಸಮಸ್ಯೆಯೇ ಅಪಹರಣಕ್ಕೆ ಕಾರಣ ಎನ್ನಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದಿಂದ ಅಪಹರಣಕ್ಕೆ ಸೂಕ್ತವಾದ ಮಗುವನ್ನು ಹುಡುಕುತ್ತಿದ್ದರು. ಪ್ರಕರಣದ ಹಿಂದೆ ಅನಿತಾ ಕುಮಾರಿಯ ಪಾತ್ರ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪದ್ಮಕುಮಾರ್ ಸ್ಥಳೀಯ ಕೇಬಲ್ ಟಿವಿ ನೆಟ್‍ವರ್ಕ್‍ನ ಕಾರ್ಯಾಚರಣೆ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ. ಕೋವಿಡ್ ನಂತರ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ. ಆತ 5 ಕೋಟಿ ರೂ. ಗೂ ಹೆಚ್ಚು ಸಾಲ ಮಾಡಿದ್ದು, ತಕ್ಷಣ 10 ಲಕ್ಷ ರೂ. ಅಗತ್ಯವಿತ್ತು ಎಂದು ತಿಳಿದು ಬಂದಿದೆ.
ಅನುಪಮಾ ಯೂಟ್ಯೂಬ್ ಮೂಲಕ ಉತ್ತಮ ಹಣಗಳಿಕೆ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ತಾಂತ್ರಿಕ ಕಾರಣಗಳಿಂದ ಅದು ನಿಂತುಹೋಗಿತ್ತು. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಈ ಹಿಂದೆ ಎರಡು ಬಾರಿ ಮಗುವನ್ನು ಅಪಹರಿಸಲು ಯತ್ನಿಸಿದ್ದರು. ಆದರೆ ಆ ಸಂದರ್ಭದಲ್ಲಿ ಆಕೆಯ ತಾಯಿ ಮತ್ತು ಅಜ್ಜಿ ಜೊತೆಗಿದ್ದ ಕಾರಣ ಯಶಸ್ವಿಯಾಗಿರಲಿಲ್ಲ. ಕಳೆದ ವಾರ ಬಾಲಕಿ ಅಣ್ಣನ ಜೊತೆ ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ಅಪಹರಿಸಲಾಗಿತ್ತು. ಬಳಿಕ ಈ ವಿಚಾರ ಭಾರೀ ಚರ್ಚೆಯಾಗುತ್ತಿದ್ದಂತೆ ಮರುದಿನ ಮೈದಾನವೊಂದರಲ್ಲಿ ಮಗುವನ್ನು ಆರೋಪಿಗಳು ಬಿಟ್ಟು ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.