ಸಮಗ್ರ ನ್ಯೂಸ್: ಬಹುನಿರೀಕ್ಷಿತ ಟುಪೆಲೋ( Tupolev Tu-142) ಏರ್ ಕ್ರಾಫ್ಟ್ ಮ್ಯೂಸಿಯಂ ಸ್ಥಾಪನೆಗೆ ಕಾರವಾರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಒಂಭತ್ತು ಟ್ರಾಲಿಗಳಲ್ಲಿ ಟುಪೆಲೋ ಬಿಡಿಭಾಗಗಳು ಚೆನ್ನೈನಿಂದ ಕಾರವಾರಕ್ಕೆ ಬಂದಿದ್ದು, ಉತ್ತರ ಕನ್ನಡದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದೊಂದು ರೀತಿಯಲ್ಲಿ ಸಂಚಲನ ಸೃಷ್ಟಿಯಾಗಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾ ಗ್ರಾಮದ ಬಳಿ ಇರುವ ಕದಂಬ ನೌಕಾನೆಲೆ ಏಷ್ಯಾದಲ್ಲೇ ಅತೀದೊಡ್ಡ ನೌಕಾನೆಲೆಯಾಗಿದ್ದು, ಇದು ಇಡೀ ರಾಜ್ಯಕ್ಕೂ ಹೆಮ್ಮೆಯನ್ನ ತಂದಿದೆ. ಇದರೊಂದಿಗೆ ಪ್ರವಾಸಿಗರನ್ನ ಆಕರ್ಷಿಸುವುದರ ಜೊತೆಗೆ ಕದಂಬ ನೌಕಾನೆಲೆಯ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನಗರದ ರವೀಂದ್ರನಾಥ ಟ್ಯಾಗೋರ್ ತೀರದಲ್ಲಿ ಇಡಲಾಗಿರುವ ಚಾಪೆಲ್ ಯುದ್ದನೌಕೆ ವಸ್ತುಸಂಗ್ರಹಾಲಯ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ.
ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಸದ್ಯ ವಾರ್‌ಶಿಪ್ ಮ್ಯೂಸಿಯಂ ಒಂದೇ ಆಕರ್ಷಣೆಯಾಗಿತ್ತು. ಆದಷ್ಟು ಶೀಘ್ರದಲ್ಲಿ ಯುದ್ಧವಿಮಾನ ವಸ್ತುಸಂಗ್ರಹಾಲಯ ಕೂಡ ಮತ್ತೊಂದು ಆಕರ್ಷಣೆಯಾಗಿ ಸದ್ಯದಲ್ಲೇ ಪ್ರವಾಸಿಗರನ್ನ ಸೆಳೆಯುವ ಸಾಧ್ಯತೆ ಇದೆ.
ಕಡಲತೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಸಾವಿರಾರು ಮಂದಿ ಯುದ್ಧನೌಕೆ ಸಂಗ್ರಹಾಲಯವನ್ನ ವೀಕ್ಷಣೆ ಮಾಡುತ್ತಿದ್ದು, ಇದೀಗ ಯುದ್ಧವಿಮಾನ ಸಂಗ್ರಹಾಲಯವೂ ಕಾರವಾರ ಕಡಲತೀರದಲ್ಲೇ ಸ್ಥಾಪನೆಯಾಗುತ್ತಿರುವುದರಿಂದ ಟ್ಯಾಗೋರ್ ಬೀಚ್‌ಗೆ ಇನ್ನಷ್ಟು ಮೆರುಗು ನೀಡಲಿದೆ ಎನ್ನುತ್ತಾರೆ ಸ್ಥಳೀಯರು.