ಸಮಗ್ರ ನ್ಯೂಸ್: ಇಂದಿರಾ ಕ್ಯಾಂಟೀನ್ ಊಟದ ಬೆಲೆಯಲ್ಲಿ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಈ ಬಗ್ಗೆ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಸಚಿವ ಹೆಚ್ಕೆ ಪಾಟೀಲ್ ಅವರೇ ಇದೀಗ ಬೆಲೆ ಏರಿಕೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಲೆ ಏರಿಕೆ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ ಹೆಚ್ಕೆ ಪಾಟೀಲ್, ಇಂದಿರಾ ಕ್ಯಾಂಟೀನ್ ಊಟದ ಬೆಲೆಯಲ್ಲಿ ಯಾವುದೇ ಹೆಚ್ಚಳವಿಲ್ಲ. ಯಥಾ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿರುವಂತೆ ದರ ಇರಲಿದೆ. ಅದರಂತೆ ತಿಂಡಿ ಬೆಲೆ 5 ರೂಪಾಯಿ ಹಾಗೂ ಮಧ್ಯಾಹ್ನ ಹಾಗೂ ರಾತ್ರಿ ಊಟ 10 ರೂಪಾಯಿ ಇರಲಿದೆ ಎಂದಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುವ ಆಹಾರದ ಬೆಲೆ ಹೆಚ್ಚಳವೂ ಒಂದು. ಇಂದಿರಾ ಕ್ಯಾಂಟೀನ್‌ನಲ್ಲಿ 10 ರೂ. ಇದ್ದ ಒಂದು ಊಟದ ಬೆಲೆ 60 ರೂ.ಗೆ ಏರಿಸಲಾಗಿದೆ. ಗ್ರಾಹಕರಿಂದ 27 ರೂ. ಪಡೆದು ಉಳಿದ ಹಣವನ್ನು (33 ರೂ.) ಸರ್ಕಾರ ಭರಿಸಲಿದೆ ಎಂದು ಹೆಚ್ಕೆ ಪಾಟೀಲ್ ತಿಳಿಸಿದ್ದರು.