Ad Widget .

ಮಲೆನಾಡು, ಕರಾವಳಿಯಲ್ಲಿ ಅಬ್ಬರಿಸುತ್ತಿರುವ ವರುಣ| ಹಲವೆಡೆ ಹಾನಿ; ತುಂಬಿ ಹರಿಯುತ್ತಿರುವ ಜೀವನದಿಗಳು

ಸಮಗ್ರ ನ್ಯೂಸ್: ಮಲೆನಾಡು ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಅಬ್ಬರದ ಮಳೆ ಮುಂದುವರಿದಿದೆ. ಕೊಡಗಿನಲ್ಲಿ ಭಾರೀ ಗಾಳಿ ಸಹಿತ ಸುರಿದ ಮಳೆಗೆ ಹಲವು ಕಡೆ ಮರ, ವಿದ್ಯುತ್‌ ಕಂಬಗಳು ರಸ್ತೆಗೆ ಉರುಳಿ ಬಿದ್ದು ಹಲವು ಗ್ರಾಮಗಳಲ್ಲಿ ಕತ್ತಲು ಆವರಿಸಿದೆ. ಮಡಿಕೇರಿ ತಾಲೂಕಿನ ಬಾಡಗ ಶಾಲೆ ಮೇಲೆ ವಿದ್ಯುತ್‌ ಕಂಬ ಉರುಳಿಬಿದ್ದರೂ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಾರದ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯ ತಪ್ಪಿದೆ.

Ad Widget . Ad Widget .

ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನು ಕೇವಲ 6 ಅಡಿ ಅಷ್ಟೇ ಬಾಕಿ ಇದ್ದು, ನದಿಗೆ ನೀರು ಹೊರಬಿಡುವ ಸಾಧ್ಯತೆ ಇದೆ. ಏತನ್ಮಧ್ಯೆ, ಕೇರಳವನ್ನು ಸಂಪರ್ಕಿಸುವ ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಬರೆ ಕುಸಿತ ಉಂಟಾಗಿದ್ದು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Ad Widget . Ad Widget .

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೈಋುತ್ಯ ಮುಂಗಾರು ಮತ್ತಷ್ಟುಚುರುಕಾಗಿದ್ದು, ಇಡೀ ದಿನ ಎಡೆಬಿಡದೆ ಮಳೆಯಾಗಿದೆ. ಮಂಗಳೂರಿನಲ್ಲಿ ಕೃತಕ ನೆರೆಯಿಂದಾಗಿ ತಗ್ಗುಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ. ಕುಮಾರಧಾರಾ ನದಿ ನೀರಿನಮಟ್ಟಏರಿಕೆಯಾಗಿ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ 51 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಇದರಿಂದ ಕದ್ರಾ-ಕಾರವಾರ ರಸ್ತೆ ಮೇಲೆ ನೀರು ಹರಿಯುತ್ತಿದೆ.

ಕಾಫಿನಾಡು ಚಿಕ್ಕಮಗಳೂರಿನ ಹಲವೆಡೆ ಭಾರೀ ಮಳೆಯಾಗುತ್ತಿದ್ದು‌ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದೆ. ಕ್ಷಣಕ್ಷಣಕ್ಕೂ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಶೃಂಗೇರಿ ನಗರದ ಗಾಂಧಿಮೈದಾನ ಸಂಪೂರ್ಣ ಜಲಾವೃತವಾಗಿದೆ.

ಬರದತ್ತ ಮುಖ ಮಾಡಿದ್ದ ರಾಜ್ಯಕ್ಕೆ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆ ತುಸು ನೆಮ್ಮದಿ ನೀಡಿದೆ. ಜು.1ರಿಂದ ಜು.22ರವರೆಗೆ ವಾಡಿಕೆಯಂತೆ ಸರಾಸರಿ 192 ಮಿ.ಮೀ. ಮಳೆಯಾಗಬೇಕಿದ್ದು, 215 ಮಿ.ಮೀ. ಮಳೆ ಸುರಿದಿದೆ. ಶೇ.12 ಹೆಚ್ಚು ಮಳೆಯಾಗಿದೆ. ಆದರೆ, ಜೂ.1ರಿಂದ ಜು.22ರವರೆಗಿನ ಅವಧಿಯಲ್ಲಿ 392 ಮಿ.ಮೀ. ಮಳೆಯಾಗಬೇಕಿತ್ತು. ಕೇವಲ 302 ಮಿ.ಮೀ. ಮಳೆ ಸುರಿದಿದ್ದು, ಈಗಲೂ ಶೇ.22ರಷ್ಟು ಮಳೆ ಕೊರತೆ ಇದೆ.

Leave a Comment

Your email address will not be published. Required fields are marked *