Ad Widget .

ವಿಧಾನಸಭಾ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ| ಇಂದು ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್: ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಯು ಟಿ ಖಾದರ್ ಇಂದು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿರುವ ಯು ಟಿ ಖಾದರ್ ಎಂಬ ಸೋಲಿಲ್ಲದ ಸರದಾರನಿಗೆ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಅಥವಾ ತತ್ಸಮಾನ ಪ್ರಮುಖ ಖಾತೆ ನೀಡಲಾಗುತ್ತೆ ಎಂದು ಊಹಿಸಲಾಗಿತ್ತು.

Ad Widget . Ad Widget .

ಆದರೆ ಸ್ಪೀಕರ್ ಹುದ್ದೆಗೆ ಯು ಟಿ ಖಾದರ್ ಹೆಸರು ಅಚ್ಚರಿಯ ಆಯ್ಕೆ. ಕಾಂಗ್ರೆಸ್ ಬಹುಮತ ಬಂದಾಕ್ಷಣ ಸ್ಪೀಕರ್ ಸ್ಥಾನಕ್ಕೆ ಆರ್ ವಿ ದೇಶಪಾಂಡೆ, ಟಿ ಬಿ ಜಯಚಂದ್ರ ಹಾಗು ಎಚ್ ಕೆ ಪಾಟೀಲ್ ಹೆಸರು ಕೇಳಿ ಬಂದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಯುಟಿ ಖಾದರ್ ಅವರನ್ನು ವಿಧಾನ ಸಭೆಯ ಸ್ಪೀಕರ್ ಹುದ್ದೆಗೆ ಕಾಂಗ್ರೆಸ್‌ ಆಯ್ಕೆ ಮಾಡಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Ad Widget . Ad Widget .

ಯು ಟಿ ಖಾದರ್ ಅವರನ್ನೇ ಸ್ಪೀಕರ್ ಮಾಡಬೇಕು ಎಂದು ದೆಹಲಿಯಿಂದಲೇ ಸೂಚನೆ ಬಂದಿತ್ತು. “ಅಲ್ಪಸಂಖ್ಯಾತರಿಗೆ ಪ್ರಮುಖ ಹುದ್ದೆ ನೀಡಬೇಕು ಎಂದು ರಾಹುಲ್ ಗಾಂಧಿ ತೀರ್ಮಾನಿಸಿದ್ದು ಸ್ಪೀಕರ್ ರಂತಹ ಪ್ರತಿಷ್ಠಿತ ಹಾಗೂ ಆತ್ಯಂತ ಜವಾಬ್ದಾರಿಯುತ ಹುದ್ದೆಗೆ ನೀವೇ ಸೂಕ್ತ ಎಂದು ಪಕ್ಷ ತೀರ್ಮಾನಿಸಿದೆ. ನೀವು ಇದನ್ನು ಒಪ್ಪಿಕೊಳ್ಳಬೇಕು” ಎಂದು ರಣದೀಪ್ ಸಿಂಗ್ ಸುರ್ಜೇವಾಲ ಖುದ್ದಾಗಿ ಯು ಟಿ ಖಾದರ್ ಗೆ ಕೇಳಿಕೊಂಡಿದ್ದಾರೆ. ಬಳಿಕ ಕೆ ಸಿ ವೇಣುಗೋಪಾಲ್ ಕೂಡಾ ಕರೆ ಮಾಡಿ ಸ್ಪೀಕರ್ ಹುದ್ದೆ ಒಪ್ಪಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಯು ಟಿ ಖಾದರ್ ಯೋಚಿಸಲು ಕಾಲಾವಕಾಶ ಕೇಳಿದ್ದು ಆ ಬಳಿಕ ಒಪ್ಪಿಗೆ ನೀಡಿದ್ದಾರೆ. ಇದೇ ವೇಳೆ ಎರಡು ವರ್ಷಗಳ ಬಳಿಕ ಸಂಪುಟ ಪುನಾರಚನೆಯಲ್ಲಿ ಯು ಟಿ ಖಾದರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಇಬ್ಬರು ನಾಯಕರು ಭರವಸೆ ನೀಡಿದ್ದಾರೆ. ಇಂದು ಬೆಳ್ಳಿಗ್ಗೆ 11.30ಕ್ಕೆ ಯುಟಿ ಖಾದರ್ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ ಕೆ ಶಿವಕುಮಾರ್ ಅವರು ನಾಮಪತ್ರಕ್ಕೆ ಸಹಿ ಹಾಕಲಿದ್ದಾರೆ.

ಎಲ್ ಎಲ್ ಬಿ ಪದವೀಧರ ಆಗಿರುವ ಯು ಟಿ ಖಾದರ್ ಸಜ್ಜನ, ಪ್ರಾಮಾಣಿಕ ರಾಜಕಾರಣಿ ಎಂದೇ ಖ್ಯಾತಿ ಹೊಂದಿರುವವರು. ಈವರೆಗೂ ಯಾವುದೇ ಅರೋಪಗಳನ್ನು ಎದುರಿಸಿದವರಲ್ಲ. ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯು ಟಿ ಖಾದರ್ ರವರು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಲ್ಲಿ ಆರೋಗ್ಯ ಆಹಾರ ಹಾಗೂ ಕುಮಾರಸ್ವಾಮಿ ಸರಕಾರದಲ್ಲಿ ವಸತಿ, ನಗರಾಭಿವೃದ್ಧಿ ಸಚಿವರಾಗಿ ಯಶಸ್ವಿ ಕಾರ್ಯನಿರ್ವಹಣೆ ಮಾಡಿದ್ದರು. ನಂತರ ವಿಧಾನಸಭೆಯ ಪ್ರತಿಪಕ್ಷ ಉಪನಾಯಕರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು.

ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುವ ಯು ಟಿ ಖಾದರ್ ಹೊಸ ಖದರ್ ಮೇ 23 ರಿಂದ ವಿಧಾನಸಭೆಯಲ್ಲಿ ಪ್ರಾರಂಭವಾಗಲಿದೆ.

Leave a Comment

Your email address will not be published. Required fields are marked *