Ad Widget .

ಬದುಕಿಗೆ ಒಳಿತು ಅಕ್ಷಯವಾಗಲಿ

ಸಮಗ್ರ ನ್ಯೂಸ್: ಇಂದು ಅಕ್ಷಯ ತೃತೀಯಾ. ಆಡುಮಾತಿನಲ್ಲಿ ಅಕ್ಷಯ ತದಿಗೆ. ವೈಶಾಖ ಮಾಸದ ಮೂರನೇ ದಿನ. ಅಕ್ಷಯವಾದುದನ್ನು ಸಂಪಾದಿಸಿಕೊಡುವ ಪರ್ವದಿನ. ಸಂಪತ್ತನ್ನು ಸಂಪಾದಿಸುವ ಮತ್ತು ಅದನ್ನು ಉಳಿಸಿಕೊಳ್ಳಲು ಅನುಕೂಲಕರವಾದ ದಿನವೇ ಅಕ್ಷಯ ತೃತೀಯಾ. ಹಿಂದೆ ಪಾಂಚಾಲ ದೇಶದ ಅಧಿಪತಿಯಾದ ಪುರುಯಶನು ತನಗೆ ಒದಗಿದ ಆಪತ್ತನ್ನು ನಿವಾರಿಸಿಕೊಳ್ಳಲು ಭಗ ವಂತನನ್ನು ಅನನ್ಯ ಭಕ್ತಿಯಿಂದ ಆರಾಧಿಸಿದನು. ಸುಪ್ರೀತನಾದ ಭಗವಂತನು ವೈಶಾಖ ಮಾಸದ ತೃತೀಯ ದಿನದಂದು ಪ್ರತ್ಯಕ್ಷನಾಗಿ ರಾಜನ ಆಪತ್ತನ್ನು ನಿವಾರಿಸಿದ್ದಲ್ಲದೆ ಆತನಿಗೆ ಸಕಲೈಶ್ವರ್ಯಗಳನ್ನೂ ಅನುಗ್ರಹಿಸಿದನು. ಜತೆಗೆ ಈ ದಿನವು ಅಕ್ಷಯ ತೃತೀಯಾ ಎಂದು ಪ್ರಸಿದ್ಧವಾಗಲೆಂದು ಅನುಗ್ರಹಿಸಿ ದನು. ಹಾಗಾಗಿ ಇದು ಲಕ್ಷ್ಮೀದೇವಿಗೂ ಪ್ರಿಯ ವಾಯಿತು.

Ad Widget . Ad Widget .

ಲಕ್ಷ್ಮೀನಾರಾಯಣರ ಆರಾಧನೆ ಯಲ್ಲಿ ತೊಡಗಿಕೊಳ್ಳುವವರಿಗೆ ಶುಭದಿನ ವಾಯಿತು. ಸಕಲೈಶ್ವರ್ಯಗಳನ್ನು ನೀಡಬಲ್ಲ ದಿನವಾದುದರಿಂದ ಸಂಪತ್ತನ್ನು ಬಯಸುವ ಮಂದಿಗೂ ಇದು ಪ್ರಿಯವಾಯಿತು. ಸಂಪತ್ತು ಎಂದೊಡನೆ ಮೊದಲಾಗಿ ಕಾಣಿಸಿಕೊಳ್ಳುವ ವಸ್ತು ಬಂಗಾರ. ಅದರ ಮೌಲ್ಯ ಕ್ಷಯಿಸದು. ಜತೆಗದು ಸುವರ್ಣ. ಮೋಡಿಯ ಬಣ್ಣ. ಪ್ರತಿಷ್ಠೆಯ ಸಂಕೇತ. ಸೌಂದರ್ಯದ ಪ್ರತೀಕ. ಈ ಹಿನ್ನೆಲೆಯಲ್ಲಿ ಇಂದು ಬಂಗಾರವನ್ನು ಕೊಳ್ಳುವ ಕ್ರಮವು ಬೆಳೆದು ಬಂದಿದೆ. ಅಕ್ಷಯ ತೃತೀಯಾದಂದು ಚಿನ್ನಾಭರಣ ಕೊಂಡರೆ ನಮ್ಮಲ್ಲಿರುವ ಸಂಪತ್ತು ವೃದ್ಧಿಯಾಗುತ್ತದೆ ಅಂದರೆ ಅಕ್ಷಯವಾಗುತ್ತದೆ ಎಂಬ ನಂಬಿಕೆ ಆಸ್ತಿಕ ಬಾಂಧವರದ್ದಾಗಿದೆ.

Ad Widget . Ad Widget .

ಇದು ಗಂಗೆಯು ಧರೆಗಿಳಿದ ದಿನ, ಪಾಂಡವರಿಗೆ ಶ್ರೀಕೃಷ್ಣನ ಅನುಗ್ರಹದಿಂದ ಅಕ್ಷಯ ಪಾತ್ರೆಯು ದೊರೆತ ದಿನ ಎಂಬ ರೂಢಿಯ ಮಾತುಗಳಿವೆ. ಈ ದಿನ ಮಾಡಿದ ತೀರ್ಥಸ್ನಾನ, ದಾನ, ಜಪ, ಯಜ್ಞ ಮೊದಲಾದ ಶ್ರೇಯಸ್ಕರವಾದ ಕಾರ್ಯಗಳು ಅಕ್ಷಯವಾದ ಶುಭಫ‌ಲವನ್ನು ನೀಡುವವು ಎಂದು ಶಾಸ್ತ್ರ ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಭಗವದನುಗ್ರಹವನ್ನು ತುಂಬಿಸಿಕೊಂಡ ಫ‌ಲವತ್ತಾದ ಕಾಲವಿದು. ಇಂದಿನ ಆಚರಣೆಗೆ ಅನಂತವಾದ ಫ‌ಲವಿದೆ ಎಂಬುದಕ್ಕೆ ಇಂದ್ರನೇ ಸಾಕ್ಷಿ. ಬಲಿ ಚಕ್ರವರ್ತಿಯಿಂದ ಪರಾಜಿತನಾದ ಇಂದ್ರನು ಇತರ ದೇವತೆಗಳಿಂದ ಒಡಗೂಡಿ ಬೃಹಸ್ಪತ್ಯಾಚಾರ್ಯರ ಮಾರ್ಗದರ್ಶನದಂತೆ ಭಗವಂತನನ್ನು ಈ ಪರ್ವ ದಿನದಲ್ಲಿ ಆರಾಧಿಸಿದನು. ಕೇವಲ ಒಂದು ದಿನದ ಆರಾಧನೆಯಿಂದ ಆತನು ಅಕ್ಷಯವಾದ ಭಗವದನುಗ್ರಹವನ್ನು ಸಂಪಾದಿಸಿ, ಮರಳಿ ಇಂದ್ರ ಪದವಿಯನ್ನು ಹೊಂದಿದನು. ಅಂದಿನಿಂದ ಎಲ್ಲ ಶುಭ ಕಾರ್ಯಗಳಿಗೂ ಈ ದಿನವು ಪ್ರಶಸ್ತವಾದ ದಿನವೆಂದು ಪರಿಗಣಿತವಾಯಿತು. ಈ ದಿನವು ಜೈನರಿಗೂ ಪವಿತ್ರವಾದ ದಿನ. ತೀರ್ಥಂಕರರಲ್ಲಿ ಮೊದಗಲಿನಾದ ವೃಷಭ ದೇವನು ತನ್ನ ಉಪವಾಸ ವ್ರತವನ್ನು ಸಮಾಪ್ತಿಗೊಳಿಸಿ, ಭಕ್ತರನ್ನು ಅನುಗ್ರಹಿಸಿದ ದಿನವಾಗಿದೆ.

ಈ ದಿನಕ್ಕೆ ಇನ್ನೊಂದು ಮಹತ್ವವಿದೆ. ದುಷ್ಟ ಕ್ಷತ್ರಿಯರ ಸಂಹಾರಕ್ಕಾಗಿ ಭಗವಂತನು ಪರಶುರಾಮನಾಗಿ ಅವತರಿಸಿದ ದಿನವಿದು. ಪರಶುರಾಮ ಜಯಂತಿ. ಕ್ಷಯಿಸುತ್ತಿದ್ದ ಸಜ್ಜನ ವೃಂದಕ್ಕೆ ಶಸ್ತ್ರಶಾಸ್ತ್ರಗಳಿಂದ ಅಕ್ಷಯಾಭಯವು ದೊರೆತ ಸುದಿನ. ಜಗತ್ತನ್ನು ಪೀಡಿಸುತ್ತಿರುವ ದುಷ್ಟರ ನಿಗ್ರಹದಲ್ಲಿ ತೊಡಗಿದವರಿಗೆ ಬಲ ವನ್ನು ನೀಡು ಎಂದು ಎಲ್ಲರೂ ಭಗವಂತ ನನ್ನು ಪ್ರಾರ್ಥಿಸಬೇಕಾದ ದಿನವಿದು. ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಈ ದಿನ ಮುನ್ನುಡಿಯನ್ನು ಬರೆಯುವಂತಾಗಲಿ. ಬೆಳಗ್ಗೆ ಬೇಗನೆ ಎದ್ದು ಗಂಗೆಯನ್ನು ಸ್ಮರಿಸಿ ತೀರ್ಥಸ್ನಾನವನ್ನು ಮಾಡೋಣ. ಬಳಿಕ ಜಪ, ಅನುಷ್ಠಾನ, ಪೂಜೆ, ದೇವರ ದರ್ಶನ, ಗುರುಗಳ ಸಂದರ್ಶನ, ಆಶೀರ್ವಾದ, ನಿರ್ಗತಿಕರಿಗೆ ದಾನ, ಪುರಾಣಾದಿಗಳ ಶ್ರವಣ, ಶ್ರೇಯಸ್ಕರವಾದ ಕಾರ್ಯಗಳ ಆರಂಭ – ಹೀಗೆ ವಿವಿಧ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ. ಕೆಟ್ಟದ್ದು ಕ್ಷಯಿಸಲಿ. ಒಳಿತು ಅಕ್ಷಯವಾಗಲಿ.

ಕೃಪೆ: ಉದಯವಾಣಿ

Leave a Comment

Your email address will not be published. Required fields are marked *