ಸಮಗ್ರ ನ್ಯೂಸ್: ಕರಾವಳಿಯ ಹಿಂದೂ ದೇವಾಲಯದ ಜಾತ್ರೆಯಲ್ಲಿ ಅನ್ಯಮತೀಯರಿಗೆ ಅವಕಾಶ ಇಲ್ಲ ಎನ್ನುವ ಬ್ಯಾನರ್ ಸಾಕಷ್ಟು ಜಾತ್ರೆಯಲ್ಲಿ ಅಳವಡಿಸಲಾಗಿತ್ತು. ಬಳಿಕ ಅನ್ಯಮತೀಯರು ಜಾತ್ರೆಗಳಿಗೆ ವ್ಯಾಪಾರಕ್ಕೆ ಬರುವುದನ್ನೇ ನಿಲ್ಲಿಸಿದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮತ್ತೆ ಧರ್ಮದಂಗಲ್ ಆರಂಭವಾಗಿದೆ.
ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ
ಎಪ್ರಿಲ್ 10ರಿಂದ 20 ತನಕ ನಡೆಯಲಿದೆ. ಕಳೆದ ವರ್ಷ ಜಾತ್ರೆಯಲ್ಲಿ ಇಲ್ಲಿ ಅನ್ಯ ಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ಬಾರಿಯೂ ಅದು ಮುಂದುವರಿದಿದ್ದು ಟೆಂಡರ್ ಮೂಲಕ ಹಿಂದುಗಳಿಗಷ್ಟೇ ವ್ಯಾಪಾರಕ್ಕೆ ಜಾತ್ರೆಯ ಮೈದಾನ ಹಂಚಿಕೆ ಆಗಿತ್ತು. ಆದರೆ ಹೀಗೆ ಟೆಂಡರ್ ಮೂಲಕ ಪಡೆದ ಜಾಗವನ್ನು ಟೆಂಡರ್ ಪಡೆದ ವ್ಯಕ್ತಿಯೊಬ್ಬರು ಮುಸ್ಲಿಂ ವ್ಯಕ್ತಿಗೆ ನೀಡಿದ್ದು ಹಿಂದೂ ಸಂಘಟನೆಗಳ ಗಮನಕ್ಕೆ ಬಂದಿತ್ತು.
ಜೈಂಟ್ ವೀಲ್ ಅಳವಡಿಸಲು ಪಡೆದಿದ್ದ ಜಾಗವನ್ನು ಟೆಂಡರ್ ಪಡೆದವರು ಮುಸ್ಲಿಂ ಸಮುದಾಯದ ವ್ಯಕ್ತಿಗೆ ಬಾಡಿಗೆಗೆ ನೀಡಿದ್ದರು.. ಈ ಬಗ್ಗೆ ಹಿಂದೂ ಸಂಘಟನೆಗಳು ದೇವಸ್ಥಾನದ ಆಡಳಿತ ಸಮಿತಿಗೆ ದೂರು ನೀಡಿ ಟೆಂಡರ್ ರದ್ದು ಮಾಡುವಂತೆ ಕೋರಿದ್ದವು. ಇದೀಗ ಸಭೆ ನಡೆಸಿರುವ ದೇವಸ್ಥಾನದ ಆಡಳಿತ ಮಂಡಳಿ ಆ ಜಾಗಕ್ಕೆ ಹೊಸ ಟೆಂಡರ್ ಕರೆದು ಬೇರೆಯವರಿಗೆ ಹಂಚಿಕೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಯಾದ ಪುತ್ತೂರು ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ಯಾವುದೇ ಅಹಿತಕರ ಘಟನೆಗಳು ಇದುವರೆಗೂ ಇಲ್ಲಿ ನಡೆದಿಲ್ಲ. ಜಾತ್ರೆಯ ಸಮಯದಲ್ಲಿ ದೇವರ ಪೇಟೆ ಸವಾರಿ ನಡೆಯುವ ವೇಳೆಯೂ ಸರ್ವ ಧರ್ಮೀಯರು ಸಹಕಾರದಿಂದ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ. ಕಳೆದೆರಡು ವರ್ಷದಿಂದ ಆರಂಭ ಆಗಿರುವ ಈ ಧರ್ಮ ದಂಗಲ್ ವಿಚಾರವಾಗಿ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.