ಸಮಗ್ರ ನ್ಯೂಸ್: ಕರಾವಳಿ ಭಾಗ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಕೇಸರಿಯ ಭದ್ರ ಕೋಟೆ ಅಂತಾನೆ ಕರೆಸಿಕೊಂಡಿರುವ ಜಿಲ್ಲೆ. ಯಾಕೆಂದರೆ ಚುನಾವಣಾ ವಿಷಯ ಬಂದಾಗ ಇಲ್ಲಿ ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷವು ಗೆಲುವು ಸಾಧಿಸುವುದು ಅಷ್ಟೇನು ಸುಲಭದ ಕೆಲಸವಲ್ಲ ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿದೆ.
ಅದರಲ್ಲೂ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸತತ 36 ವರ್ಷಗಳಿಂದ ಬಿಜೆಪಿ ಗೆಲುವು ಸಾಧಿಸಿದ ಹೆಮ್ಮೆ ರಾಜ್ಯ ರಾಜಕೀಯಕ್ಕೆ ಸಲ್ಲುತ್ತದೆ. ಬರೋಬ್ಬರಿ 6 ಬಾರಿ ಸ್ಪರ್ಧಿಸಿ ವಿಜಯದ ಪತಾಕೆ ಹಾರಿಸಿದ ಎಸ್ ಅಂಗಾರರ ಕಾರ್ಯವೈಖರಿಯನ್ನು ಒಂದು ರೀತಿಯಲ್ಲಿ ತಳ್ಳಿಹಾಕುವಂತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವೊಬ್ಬ ನಾಯಕರು 6 ಬಾರಿ ಸತತವಾಗಿ ವಿಧಾನಸಭೆಗೆ ಗೆದ್ದು ಬಂದಿರುವ ಇತಿಹಾಸಗಳಿಲ್ಲ. ಇದೆಲ್ಲದರ ಕ್ರೆಡಿಟ್ ಪಡೆದುಕೊಂಡಿರುವ ಮೀನುಗಾರಿಕಾ ಸಚಿವರಾದ ಎಸ್ ಅಂಗಾರರನ್ನು ಈ ಬಾರಿ ಶತಾಯ ಗತಾಯ ಸೋಲಿಸಲೇಬೇಕೆಂಬ ಲೆಕ್ಕಚಾರ ಹಾಕಿಕೊಂಡಿರುವ ಕಾಂಗ್ರೆಸ್ ಈ ಬಾರಿ ಗೆಲ್ಲುವ ಕುದುರೆಯನ್ನೇ ಕಣಕ್ಕಿಳಿಸುವ ಪ್ರಯತ್ನ ಮಾಡುತ್ತಿದೆ.
ಸುಳ್ಯ ವಿಧಾನ ಸಭಾ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳಲು ಕೈ ಪಾಳಯ ಹರಸಾಹಸಪಡುತ್ತಿದೆ.
ಕಾಂಗ್ರೆಸ್ ನಿಂದ ಮೂರು ಬಾರಿ ಆಯ್ಕೆ ಬಯಸಿ ಅಂಗಾರರ ವಿರುದ್ದ ಕಣಕ್ಕಿಳಿದಿದ್ದ ಡಾ. ರಘು ಈ ಬಾರಿ ರಾಜಕೀಯದಿಂದ ದೂರವಾಗಿದ್ದಾರೆ. ಆದರೆ ಅವರ ಇಬ್ಬರು ಮಕ್ಕಳು ಪಕ್ಷಕ್ಕೆ ಸುಳ್ಯದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೈ ಪಾಳಯದಿಂದ ಹೆಚ್.ಎಂ ನಂದಕುಮಾರ್, ಜಿ.ಕೃಷ್ಣಪ್ಪರವರೂ ಅರ್ಜಿ ಸಲ್ಲಿಸಿದ್ದು, ಈ ಬಾರಿ ಕಾಂಗ್ರೆಸ್ ಗೆ ಅಭ್ಯರ್ಥಿಯ ಆಯ್ಕೆ ಕೊಂಚ ಕಷ್ಟವಾಗಿದೆ.
ಯಾಕೆಂದ್ರೆ ಈ ಹಿಂದೆಲ್ಲಾ ಪಕ್ಷದಲ್ಲಿ ಟಿಕೆಟ್ ಗೆ ಲಾಭಿ ಮಾಡಿವರಿಲ್ಲ. ಆದರೆ ಈ ಬಾರಿ ಪೈಪೋಟಿ ಶುರುವಾಗಿದೆ. ಅದಾಗ್ಯೂ ಪಕ್ಷ ಅಳೆದು ತೂಗಿ ಜಿ. ಕೃಷ್ಣಪ್ಪರವರನ್ನು ಕಣಕ್ಕಿಳಿಸುವುದಕ್ಕೆ ಮುಂದಾಗಿರುವುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸುಳ್ಯದಲ್ಲಿ ಈ ಮೊದಲು ನಂದಾಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಎಂದು ಸುದ್ದಿಯೊಂದು ಹಬ್ಬಿತ್ತು. ಆದರೆ ಇದೀಗ ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಯ ಹೆಸರು ಬದಲಾಗುತ್ತಿದ್ದು, ನಂದಕುಮಾರ್ ಬದಲಿಗೆ ಜಿ. ಕೃಷ್ಣಪ್ಪರವರ ಹೆಸರು ಮುಂಚೂಣಿಯಲ್ಲಿರುವುದು ಕೇಳಿ ಬಂದಿದೆ.
ಹೆಚ್ಚೂ ಕಮ್ಮಿ ಮೂರು ದಶಕಗಳಿಂದ ಸುಳ್ಯ ಕ್ಷೇತ್ರದಲ್ಲಿ ರಾಜಕೀಯ ವನವಾಸ ಅನುಭವಿಸುತ್ತಿರುವ ಕಾಂಗ್ರೆಸ್ ಈ ಬಾರಿಯಾದರೂ ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಇಡುತ್ತಾ? ಕಾದುನೋಡಬೇಕಿದೆ.