ಸಮಗ್ರ ನ್ಯೂಸ್: ಕಾಡಾನೆ ದಾಳಿಯಿಂದ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯ ನೈಲ ಎಂಬಲ್ಲಿ ಇಬ್ಬರು ಬಲಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು ಕಾಡಾನೆಯನ್ನು ಸೆರೆಹಿಡಿಯಲು ಮುಂದಾಗಿದೆ.
ಸೋಮವಾರ(ಫೆ.20) ಮುಂಜಾನೆ ದುರ್ಘಟನೆ ಸಂಭವಿಸಿದ್ದು, ಅಂದು ರಾತ್ರಿಯೇ ಬೃಹತ್ ಲಾರಿಗಳ ಮೂಲಕ ಮೈಸೂರು ಹಾಗೂ ದುಬಾರೆಯಿಂದ ಐದು ಆನೆಗಳು ಆಗಮಿಸಿದ್ದು, ಇಂದು(ಫೆ.21) ಬೆಳಗ್ಗಿನಿಂದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ.
ಅರಣ್ಯ ಇಲಾಖೆಯು ಕಾಡಾನೆಯ ಚಲನವಲನ ಪತ್ತೆ ಹಚ್ಚಲು ಡ್ರೋನ್ ಬಳಸಿ ಮಾಹಿತಿ ಕಲೆ ಹಾಕಿತ್ತು. ಪೂರ್ವ ಸಿದ್ದತೆಯೊಂದಿಗೆ ಕಾಡಾನೆಯನ್ನು ಪತ್ತೆ ಹಚ್ಚಿ ಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಅರಣ್ಯ ಇಲಾಖಾಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಫೆ.20ರಂದು ಬೆಳಿಗ್ಗೆ ಕಾಡಾನೆಯು ಇಬ್ಬರನ್ನು ತಿವಿದು ಕೊಂದು ಹಾಕಿತ್ತು. ಆಕ್ರೋಶಗೊಂಡ ಸ್ಥಳೀಯರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಯನ್ನು ಸ್ಥಳಾಂತರಗೊಳಿಸದೆ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಮೃತದೇಹವನ್ನು ವಾರಸುದಾರರಿಗೆ ನೀಡಲಾಗಿತ್ತು.
ಕಡಬ ತಾಲೂಕಿನ ಗುಂಡ್ಯ, ಕುಟ್ರುಪ್ಪಾಡಿ, ಕೊಣಾಜೆ, ಕೊಂಬಾರು, ಬಿಳಿನೆಲೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಮೂರು ಮಂದಿ ಬಲಿಯಾಗಿದ್ದಾರೆ. ಅಪಾರ ಕೃಷಿ ಹಾನಿ ಸಂಭವಿಸುತ್ತಿದ್ದು, ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದ ಈ ಸಮಸ್ಯೆಗೆ ಮುಕ್ತಿ ಸಿಗಲಿ ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.