Ad Widget .

ರೈತರ ಸಾಲಮನ್ನಾದಿಂದ ದೇಶದ ಆರ್ಥಿಕತೆಗೆ ಉಪಯೋಗವಿಲ್ಲ – ತೇಜಸ್ವಿ ಸೂರ್ಯ| ಉದ್ಯಮಿಗಳ ಮೇಲಿನ ಸಾಲಮನ್ನಾದಿಂದ ಲಾಭವಿದೆಯೇ? ಎಂದ ರೈತ ಮುಖಂಡರು

ಸಮಗ್ರ ನ್ಯೂಸ್: ರೈತರ ಸಾಲಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.

Ad Widget . Ad Widget .

ಮಂಗಳೂರಿನಲ್ಲಿ ಮಾತನಾಡಿರುವ ಅವರು, “ಆಗ ಯುಪಿಎ ಸರ್ಕಾರವಿತ್ತು. 2009ನೇ ಇಸವಿಯಲ್ಲಿ ಚುನಾವಣೆಗೆ ಹೋಗಬೇಕಿತ್ತು. 2008ನೇ ಇಸವಿಯ ಬಜೆಟ್‌ನಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿದರು. ಚುನಾವಣೆ ಗೆಲ್ಲುವ ದೃಷ್ಟಿಯಲ್ಲಿ ಈ ಕ್ರಮ ಜರುಗಿಸಿದರು. ಸಾಲಮನ್ನಾದಿಂದ ತಾತ್ಕಾಲಿಕವಾಗಿ ರೈತರಿಗೆ ಒಂದಿಷ್ಟು ಉಪಯೋಗವಾಯಿತು. ಅದರಿಂದ ದೇಶದ ಆರ್ಥಿಕತೆಗೆ ಯಾವುದೇ ರೀತಿಯ ಉಪಯೋಗವಾಗಲಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

Ad Widget . Ad Widget .

“ಮುಂದಿನ ವರ್ಷ ಚುನಾವಣೆ ಇದ್ದರೂ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ದೇಶಕ್ಕೆ ಲುಕ್ಸಾನು (ನಷ್ಟ) ಆಗುವಂತಹ ಜನಪ್ರಿಯ ಯೋಜನೆಗಳಿಗೆ ಹೋಗಲಿಲ್ಲ. ಬದಲಿಗೆ ಹತ್ತು ಲಕ್ಷ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡುತ್ತೇವೆ, ಮೂಲಸೌಕರ್ಯ ಸೃಷ್ಟಿಸುತ್ತೇವೆ, ಆ ಮೂಲಕ 30 ಲಕ್ಷ ಕೋಟಿ ರೂ. ಲಾಭವನ್ನು ಈ ದೇಶದಲ್ಲಿ ಕಾಣುತ್ತೇವೆ ಎನ್ನುವಂತಹ ದೂರದೃಷ್ಟಿಯ ಕೆಲಸವನ್ನು ಮೋದಿಯವರ ಸರ್ಕಾರ ಮಾಡಿದೆ” ಎಂದು ಬಣ್ಣಿಸಿದ್ದಾರೆ.

ಸಂಸದರ ಹೇಳಿಕೆಗೆ ಅನೇಕ ರೈತ ಮುಖಂಡರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜಾಲತಾಣಗಳಲ್ಲಿ ಕೂಡಾ ಹೇಳಿಕೆಯ ಪರವಿರೋಧ ಚರ್ಚೆಗಳಾಗಿವೆ.‌ ರೈತ ಮುಖಂಡರಾದ ಎಚ್.ಆರ್‌. ಬಸವರಾಜಪ್ಪ, “ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ವೈಜ್ಞಾನಿಕ ಬೆಲೆ ನಿಗದಿ ಮಾಡಿದರೆ ಸಾಲ ಮನ್ನಾ ಮಾಡುವ ಅಗತ್ಯ ಬರುವುದಿಲ್ಲ. ಇವರು ಬಂಡವಾಳಶಾಹಿಗಳಿಗೆ ಶೇ. 1ರಷ್ಟು ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. ರೈತರಿಗೆ ಶೇ. 12ರಿಂದ ಶೇ. 36ರ ದರದಲ್ಲಿ ಬಡ್ಡಿ ವಿಧಿಸಿ ಸಾಲ ನೀಡುತ್ತಾರೆ. ಕಳೆದ 16 ವರ್ಷಗಳಲ್ಲಿ ರೈತರಿಗೆ 45 ಲಕ್ಷ ಕೋಟಿ ನಷ್ಟವಾಗಿದೆ ಎಂದು ಸರ್ಕಾರಿ ಸಂಸ್ಥೆಗಳೇ ಹೇಳುತ್ತಿವೆ. ಇದನ್ನು ಯಾರು ಕೊಡುತ್ತಾರೆ? ನಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕಲ್ಲವೇ? ನಷ್ಟಕ್ಕೆ ಪರಿಹಾರವಾಗಿ ಸಾಲಮನ್ನಾ ಮಾಡುತ್ತಿದ್ದಾರಷ್ಟೇ” ಎಂದಿದ್ದಾರೆ.

“ಬಂಡವಾಳಶಾಹಿಗಳು ಕೋಟಿ ಕೋಟಿ ಹಣವನ್ನು ಮುಳುಗಿಸುತ್ತಾರೆ. ಈ ತೇಜಸ್ವಿ ಸೂರ್ಯನಂಥವರಿಗೆ ರೈತರ ಹೆಸರು ಹೇಳುವ ಯೋಗ್ಯತೆ ಇಲ್ಲ. ಕೈಗಾರಿಕೋದ್ಯಮಿಗಳ ಸಾಲವನ್ನು ಮನ್ನಾ ಮಾಡಿದ್ದು ಏಕೆ? ರೈತರ ಸಾಲ ಮನ್ನಾ ಬಂದಾಗ ಇವರ ಕಣ್ಣು ಕೆಂಪಾಗುತ್ತವೆ. ತೇಜಸ್ವಿ ಸೂರ್ಯ ರೈತರಲ್ಲ, ದೇಶಪ್ರೇಮಿಯೂ ಅಲ್ಲ, ದೇಶಕ್ಕೆ ಇವರ ಕೊಡುಗೆ ಏನೆಂದು ಸ್ಪಷ್ಟಪಡಿಸಬೇಕು. ರೈತರ ಬಗ್ಗೆ ಮಾತನಾಡುವ ನೈತಿಕತೆ ತೇಜಸ್ವಿಸೂರ್ಯರಿಗೆ ಇಲ್ಲ. ಹಿಂದುತ್ವ ಹೆಸರಲ್ಲಿ ಯುವಕರನ್ನು ಕೆರಳಿಸಿ ಮತಹಾಕಿಸಿಕೊಂಡು ಗೆದ್ದಂತೆ ಅಲ್ಲ” ಎಂದು ಟೀಕಿಸಿದ್ದಾರೆ.

ಸಂಸದರ ಹೇಳಿಕೆಗೆ ಸಂಬಂಧಿಸಿದಂತೆ ಮದ್ದೂರಿನ ರೈತ ಮುಖಂಡರಾದ ಟಿ.ಯಶವಂತ್‌ ಪ್ರತಿಕ್ರಿಯಿಸಿ, “ತೇಜಸ್ವಿ ಸೂರ್ಯ ಅವರಿಗೆ ಅರ್ಥ ವ್ಯವಸ್ಥೆಯ ಎಬಿಸಿಡಿ ಗೊತ್ತಿಲ್ಲ. ಶತಮೂರ್ಖನ ರೀತಿ ಮಾತನಾಡಿದ್ದಾರೆ. ಜಗತ್ತು ಆರ್ಥಿಕ ಹಿಂಜರಿತದಿಂದ ಹೊರಬರಬೇಕಾದರೆ ಜನತೆಯಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಇಂದು ಸಲಹೆಗಳನ್ನು ನೀಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅರ್ಥ ವ್ಯವಸ್ಥೆಯ ಬಗ್ಗೆ ಏನೂ ಗೊತ್ತಿಲ್ಲದ ರೀತಿಯಲ್ಲಿ ಅಜ್ಞಾನವನ್ನು ತೇಜಸ್ವಿ ಪ್ರದರ್ಶನ ಮಾಡಿದ್ದಾರೆ” ಎಂದು ಟೀಕಿಸಿದರು

Leave a Comment

Your email address will not be published. Required fields are marked *