ಸಮಗ್ರ ನ್ಯೂಸ್: “ಸಾಕು ಮಾಡು ನಿನ್ನ ಹುಚ್ಚಾಟ. ಎಷ್ಟು ಸಲ ಹೇಳಿದರೂ ನೀನು ಕೇಳುವುದೇ ಇಲ್ಲವಲ್ಲ. ನನಗೆ ಕೋಪ ಬರುತ್ತಿದೆ. ನಿನ್ನೊಂದಿಗೆ ನಾನು ಮಾತನಾಡುವುದೇ ಇಲ್ಲ” ಹೀಗೆ ಟೀಚರ್ ಹೇಳಿದಾಗ ಯಾವ ಮಗುವಿಗೆ ದುಃಖವಾಗುವುದಿಲ್ಲ? ಆಗ ಮಗು ಕ್ಷಮೆ ಕೇಳದೆ ಬೇರೆ ಹಾದಿ ಇದೆಯೆ? ಕ್ಷಮೆ ಕೇಳಿದರೂ ಟೀಚರ್ ಮಣಿಯದಿದ್ದಾಗ ಏನು ಮಾಡಬೇಕು? ಏನು ಮಾಡಬೇಕೋ ಅದನ್ನೇ ಮಾಡಿ ಟೀಚರ್ ಮನಸ್ಸನ್ನು ಕರಗಿಸಿದ್ದಾನೆ ಈ ಪುಟ್ಟಣ್ಣ. ವೈರಲ್ ಆದ ಈ ಟೀಚರ್-ಸ್ಟೂಡೆಂಟ್ ಜೋಡಿಯ ವಿಡಿಯೋ ಅನ್ನು ನಿನ್ನೆಯಷ್ಟೇ ನೀವು ನೋಡಿ ಮೆಚ್ಚಿದ್ದೀರಿ. ಇದೀಗ ಇದು ಮತ್ತಷ್ಟು ವೈರಲ್ ಆಗಿರುವುದಲ್ಲದೆ, ಇದಕ್ಕೆ ಪ್ರತಿಯಾಗಿ ಪುಟ್ಟಣ್ಣನ ಟೀಚರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಯಾರು ಈ ಟೀಚರ್, ಯಾರು ಈ ಬಾಲಕ? ಎಂಬೆಲ್ಲ ಪ್ರಶ್ನೆಗಳು ನಿನ್ನೆಯಿಂದ ನಿಮ್ಮ ಮನಸ್ಸಿನಲ್ಲಿ ದಾಂಗುಡಿ ಇಟ್ಟಿರುತ್ತವೆ. ಉತ್ತರಪ್ರದೇಶದ ನೈನಿಯಲ್ಲಿರುವ ಸೇಠ್ ಆನಂದರಾಮ್ ಜೈಪುರಿಯಾ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರ ಹೆಸರು ವಿಶಾಖಾ ತ್ರಿಪಾಠಿ. ಈ ಟೀಚರ್ ಅನ್ನು ತನ್ನ ಮುದ್ದು, ಮುತ್ತಿನಿಂದ ಜಗದ್ವ್ಯಾಪಿಯಾಗಿಸಿರುವ ಶಿಷ್ಯೋತ್ತಮನ ಹೆಸರು ಅಥರ್ವ.
ಇಂಡಿಯಾ ಟುಡೇ ವರದಿಯ ಪ್ರಕಾರ, ಮಕ್ಕಳಿಗಾಗಿ ಶಾಲೆಯಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸಿದ ಸಂದರ್ಭದಲ್ಲಿ ವಿಶಾಖಾ ಸಹೋದ್ಯೋಗಿ ನಿಶಾ, ಈ ದೃಶ್ಯವನ್ನು ವಿಡಿಯೋ ಮಾಡಿ ದಾಖಲಿಸಿದ್ದಾರೆ.
ಕ್ಲಾಸಿನಲ್ಲಿ ಹೆಚ್ಚು ಗಲಾಟೆ ಮಾಡುವ ಹುಡುಗರ ಪೈಕಿ ಈ ಅಥರ್ವ ಕೂಡ ಒಬ್ಬನಂತೆ. ನಿನ್ನೆ ವೈರಲ್ ಆದ ಇವರಿಬ್ಬರ ವಿಡಿಯೋದಲ್ಲಿ, ‘ನೀನು ಬಹಳ ಗಲಾಟೆ ಮಾಡುತ್ತೀಯಾ. ಅದಕ್ಕೆ ನಾ ನಿನ್ನೊಂದಿಗೆ ಮಾತನಾಡುವುದಿಲ್ಲ’ ಎಂದು ಟೀಚರ್ ಹುಸಿಕೋಪ ಪ್ರದರ್ಶಿಸಿದ್ದರು. ಆದರೆ ಕಂಗಾಲಾದ ಅಥರ್ವ ಬಗೆಬಗೆಯಲ್ಲಿ ವಿನಂತಿಸಿಕೊಂಡು ಕ್ಷಮೆ ಕೇಳಿ, ಕೊನೆಗೆ ಏನೂ ದಾರಿ ಕಾಣದಾದಾಗ ಅವರನ್ನು ಅಪ್ಪಿ ಮುದ್ದು ಕೊಟ್ಟಿದ್ದ. ನಂತರವೂ ಟೀಚರ್ಗೆ ಕೋಪ ನಟಿಸಲು ಸಾಧ್ಯವೆ?
ಹೀಗೆ ತರಗತಿಯಲ್ಲಿ ಆಗಾಗ ಶಿಕ್ಷಕರು ವಿಡಿಯೋ ಮಾಡಿ ಪೋಷಕರೊಂದಿಗೆ ಹಂಚಿಕೊಳ್ಳುವ ಕ್ರಮ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅದನ್ನು ಪೋಷಕರಿಗೆ ಕಳಿಸಿದಾಗ ಅವರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಹಾಗೆಯೇ ಟೀಚರ್ಗಳೂ. ‘ಈ ವಿಡಿಯೋ ನನಗೆ ನಿಜಕ್ಕೂ ಇಷ್ಟವಾಯಿತು. ಆದ್ದರಿಂದ ನಾನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಅದು ವೈರಲ್ ಆಗಿಬಿಟ್ಟಿತು’ ಎಂದಿದ್ದಾರೆ ವಿಶಾಖಾ.