Ad Widget .

ಪ್ರಧಾನಿ ಭೇಟಿ ನೀಡಿ ಹತ್ತೇದಿನದಲ್ಲಿ ಕಿತ್ತು ಹೋಯ್ತು‌ ಡಾಂಬರು| ಅಬ್ಬಬ್ಬಾ ನಮ್ಮ ಕಾಮಗಾರಿಗಳ ಗುಣಮಟ್ಟವೇ!!

ಸಮಗ್ರ ನ್ಯೂಸ್: ಮಂಗಳೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚುವ ಸಲುವಾಗಿ ಹಾಕಿದ್ದ ಡಾಂಬರು ಮೋದಿ ಭೇಟಿ ನೀಡಿ ಹೋದ ಹತ್ತೇ ದಿನಗಳಲ್ಲಿ ಕಿತ್ತುಹೋಗಿದೆ.

Ad Widget . Ad Widget .

ನವಮಂಗಳೂರು ಬಂದರಿನಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಸೆ.2ರಂದು ನಗರಕ್ಕೆ ಭೇಟಿ ನೀಡಿದ್ದರು. ಬಂಗ್ರಕೂಳೂರಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ಮೋದಿ ಅವರು ನವಮಂಗಳೂರು ಬಂದರಿನಿಂದ ರಸ್ತೆ ಮಾರ್ಗವಾಗಿ ಸಂಚರಿಸಿದ್ದರು. ಅವರು ಸಾಗುವ ರಸ್ತೆಯಲ್ಲಿದ್ದ ಗುಂಡಿಗಳನ್ನು ಕಾರ್ಯಕ್ರಮಕ್ಕೆ ಎರಡು ದಿನಗಳಿಗೆ ಮುಂಚಿತವಾಗಿ ಮುಚ್ಚಿ, ತರಾತುರಿಯಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಈ ಹೆದ್ದಾರಿಯಲ್ಲಿ, ಕೂಳೂರು ಸೇತುವೆ ಮೇಲೆ ಮತ್ತೆ ಗುಂಡಿಗಳು ಕಾಣಿಸಿಕೊಂಡಿವೆ.

Ad Widget . Ad Widget .

‘ಕೂಳೂರು ಹಾಗೂ ಪಣಂಬೂರು ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣವಾಗಿದ್ದ ಗುಂಡಿಗಳನ್ನು ಮುಚ್ಚಲು ನಾಲ್ಕು ತಿಂಗಳಿನಿಂದ ಜನ ಒತ್ತಾಯಿಸಿದ್ದರು. ಆದರೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಗುಂಡಿ ಮುಚ್ಚಲು ಕ್ರಮ ಕೈಗೊಂಡಿರಲಿಲ್ಲ. ಪ್ರಧಾನಿ ಬರುವ ಕಾರ್ಯಕ್ರಮ ನಿಗದಿಯಾದ ನಾಲ್ಕೇ ದಿನಗಳಲ್ಲಿ ಇಲ್ಲಿನ ರಸ್ತೆಗಳ ಚಿತ್ರಣವೇ ಬದಲಾಗಿತ್ತು. ಡಾಂಬರೀಕರಣ ನಡೆಸಿದ ಹತ್ತೇ ದಿನಗಳಲ್ಲೇ ಹೆದ್ದಾರಿಯಲ್ಲಿ ಮತ್ತೆ ಗುಂಡಿ ನಿರ್ಮಾಣವಾಗುವ ಮೂಲಕ ಈ ಕಾಮಗಾರಿಯ ಅಸಲಿಯತ್ತು ಕೂಡ ಬಟಾಬಯಲಾಗಿದೆ’ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿಯೇ ಇರಲಿ ಅಥವಾ ಇತರ ರಸ್ತೆಗಳೇ ಇರಲಿ, ಅವುಗಳಲ್ಲಿ ಹೊಂಡ ಬಿದ್ದಷ್ಟು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹೊಟ್ಟೆ ತುಂಬುತ್ತದೆ. ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾದಷ್ಟೂ ಅವುಗಳ ದುರಸ್ತಿಗೆ ಹೆಚ್ಚು ಬಿಲ್‌ ಮಾಡಬಹುದು. ಗುಂಡಿ ಮುಚ್ಚುವ ವಿಚಾರದಲ್ಲಂತೂ ಎಳ್ಳಿನಿತೂ ಪಾರದರ್ಶಕತೆ ಇಲ್ಲ. ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಉತ್ತರದಾಯಿತ್ವ ಇಲ್ಲದಿದ್ದಾಗ ಜನರು ಇಂತಹ ಅವ್ಯವಸ್ಥೆಗಳನ್ನು ನೋಡಬೇಕಾಗುತ್ತದೆ’ ಎಂದು ಹೋರಾಟಗಾರರು ಟೀಕಿಸಿದ್ದಾರೆ.

ಪ್ರಧಾನಿ ಬರುತ್ತಾರೆಂದು ಸುರಿದ ದುಡ್ಡು ವಾಪಾಸ್ಸು ಗಳಿಸೋದು ಹೇಗೆ?
‘ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಂಡಿ ನಿರ್ಮಾಣವಾಗುವುದು ಸಹಜ. ಸಣ್ಣ ಹೊಂಡ ಬಿದ್ದಾಗಲೇ ಅದನ್ನು ಮುಚ್ಚುವುದಕ್ಕೆಂದೇ ಗ್ಯಾಂಗ್‌ಮನ್‌ ವ್ಯವಸ್ಥೆ ಇದೆ. ಹೆದ್ದಾರಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದಕ್ಕೆಂದೇ ಎಂಜಿನಿಯರ್‌ಗಳು ಇರುತ್ತಾರೆ. ಇಷ್ಟೆಲ್ಲ ಇದ್ದೂ ರಸ್ತೆಗಳು ಗುಂಡಿ ಬೀಳುತ್ತವೆ ಎಂದಾದರೆ ಅಧಿಕಾರಿಗಳಿಗೆ ಸಂಬಳ ಕೊಡುವುದಾದರೂ ಏಕೆ. ಈ ತರಾತುರಿಯಲ್ಲಿ ಕಳಪೆ‌ ಕಾಮಗಾರಿ ಮಾಡಿ ಕಿತ್ತು ಹೋಗಿರುವ ಡಾಂಬರಿಗಾಗಿ ಸುರಿದ ಹಣವನ್ನು ಭರ್ತಿ ಮಾಡುವುದು ಹೇಗೆ?’ ಎಂಬುದು ಸಾರ್ವಜನಿಕರ ಪ್ರಶ್ನೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಗ್ರಹವಾಗುವ ಶುಲ್ಕವನ್ನು ಆಯಾ ಪ್ರದೇಶದ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಬೇಕು. ನಮ್ಮಲ್ಲಿ ಹೆದ್ದಾರಿಗಳ ನಿರ್ವಹಣೆ ಮರೀಚಿಕೆಯಾಗಿದೆ. ಟೋಲ್‌ ಪ್ಲಾಜಾಗಳಲ್ಲಿ ನಿತ್ಯವೂ ಸಂಗ್ರಹವಾಗುವ ಲಕ್ಷಗಟ್ಟಲೆ ರೂಪಾಯಿಯಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೂ ಪಾಲು ಸಿಗುತ್ತಿದೆ ಎಂಬುವುದರಲ್ಲಿ ಸಂಶಯವಿಲ್ಲ. ಇಂತಹ ಸಮಸ್ಯೆ ಮರುಕಳಿಸುವುದನ್ನು ತಡೆಯಬೇಕಾದರೆ ಜನರು ಚುನಾವಣೆ ಬಂದಾಗ ಜನರು ಭಾವನಾತ್ಮಕ ವಿಚಾರಗಳಿಗೆ ಮರುಳಾಗದೇ ಆಡಳಿತದ ವೈಖರಿಯನ್ನು ನೋಡಿ ಮತ ಚಲಾಯಿಸಬೇಕಿದೆ.

Leave a Comment

Your email address will not be published. Required fields are marked *