ಸಮಗ್ರ ನ್ಯೂಸ್: ಬಿಜೆಪಿ ಮತ್ತು ಜೆಡಿಯು ಮೈತ್ರಿಯು 2024ರ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರಿಯುತ್ತದೆ. ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಯಾಗಿರುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ವಿವಿಧ ಮೋರ್ಚಾಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪ್ರಧಾನಿ ಅಭ್ಯರ್ಥಿ ಯಾರಾಗಿರಬೇಕು ಎನ್ನುವುದು ಬಿಸಿಬಿಸಿ ಚರ್ಚೆಯ ವಿಚಾರವಾಗಿತ್ತು. ಹೊಸಬರಿಗೆ ಅವಕಾಶ ನೀಡಿ, ನರೇಂದ್ರ ಮೋದಿ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಬಹುದು ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಇದೀಗ ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾದ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಅಮಿತ್ ಶಾ ಘೋಷಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿಹಾರದಲ್ಲಿ ಜೆಡಿಯು ಜೊತೆಗೆ ಮಾಡಿಕೊಂಡಿರುವ ಮೈತ್ರಿಯ ಬಗ್ಗೆಯೂ ಚರ್ಚೆ ನಡೆಯಿತು. 2024ರ ಲೋಕಸಭೆ ಮತ್ತು 2025ರ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿಯೂ ಈ ಮೈತ್ರಿ ಆಬಾಧಿತವಾಗಿ ಮುಂದುವರಿಯಲಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಅವರು ಹೇಳಿದರು.