ಸಮಗ್ರ ನ್ಯೂಸ್: ಬಾಂಗ್ಲಾದೇಶದಲ್ಲಿ ಕೊಲೆ ಮಾಡಿ ಬೆಂಗಳೂರಿನ ಬೊಮ್ಮನಹಳ್ಳಿಗೆ ಬಂದು ನೆಲೆಸಿದ್ದ ಆರೋಪಿಯನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದಾರೆ. ಫೈಜಲ್ ಅಹಮದ್ ಬಂಧಿತ ಆರೋಪಿ. ಉಗ್ರ ಸಂಘಟನೆ ಅಲ್ ಖೈದಾ ಜತೆಗೂ ಆರೋಪಿ ಸಂಪರ್ಕ ಹೊಂದಿದ್ದ ಎಂದು ಶಂಕಿಸಲಾಗಿದೆ.
ಬಾಂಗ್ಲಾ ಮತ್ತು ಕೋಲ್ಕತ್ತಾ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಜುಲೈ 1ರಂದು ನಗರದ ಬೊಮ್ಮನಹಳ್ಳಿಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.
ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದ ಆರೋಪಿ ಫೈಜಲ್ 2015ರ ಮೇ.12ರಂದು ಬಾಂಗ್ಲಾದ ಸಿಲೆಟ್ನಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ವಿಜ್ಞಾನ ಬರಹಗಾರ ಮತ್ತು ಬ್ಲಾಗರ್ ಅನಂತ್ ವಿಜಯ ದಾಸ್ ಹತ್ಯೆ ಸಂಬಂಧ ಫೈಜಲ್ ಸಹಿತ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ಫೈಜಲ್‌ಗಾಗಿ ಬಾಂಗ್ಲಾ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮದರಸಗಳಿಗೆ ತೆರಳಿ ಜಿಹಾದಿ ಬಗ್ಗೆ ಪ್ರವಚನ ನೀಡ್ತಿದ್ದ ಫೈಜಲ್, ಅಲ್ ಖೈದ ಸಂಘಟನೆಗಾಗಿ ಕೆಲಸ ಮಾಡ್ತಿದ್ದ. ಭಾರತದಲ್ಲಿ ಇರುವ ಬಗ್ಗೆ ಬಾಂಗ್ಲಾ ಪೊಲೀಸರಿಗೆ ಜೂನ್ನಲ್ಲಿ ಮಾಹಿತಿ ಸಿಕ್ಕಿತ್ತು. ಕೋಲ್ಕತ್ತಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದ ಬಾಂಗ್ಲಾ ಪೊಲೀಸ್ ಅವರ ಸಹಕಾರದಿಂದ ಆರೋಪಿಯನ್ನ ಬಂಧಿಸಿ, ಬಾಂಗ್ಲಾಗೆ ಕರೆದೊಯ್ದಿದ್ದಾರೆ.
ಅಕ್ರಮ ದಾಖಲೆ ಸೃಷ್ಟಿ: ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಫೈಜಲ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಕೊಂಡಿದ್ದ. ಮಿಜೋರಾಂ ಅಡ್ರೆಸ್ ಬಳಸಿ ಪಾಸ್‌ಪೋರ್ಟ್, ಅಸ್ಸಾಂನ ಅಡ್ರೆಸ್ ಬಳಸಿ ವೋಟರ್ ಐಡಿ, ಬೆಂಗಳೂರು ಅಡ್ರೆಸ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡಿದ್ದ.