ಸಮಗ್ರ ನ್ಯೂಸ್: ಠೇವಣಿದಾರರ ಹೆಸರಿನಲ್ಲಿ ಸಾಲ ಪಡೆದ ಬ್ಯಾಂಕ್ ವ್ಯವಸ್ಥಾಪಕ, ಡೇಟಿಂಗ್ ಆಯಪ್ನಲ್ಲಿ ಪರಿಚಯವಾದ ಯುವತಿಗೆ ಕೇವಲ 6 ದಿನದಲ್ಲಿ ಬರೋಬ್ಬರಿ 5.70 ಕೋಟಿ ರೂ. ಕೊಟ್ಟಿದ್ದಾನೆ. ವ್ಯವಸ್ಥಾಪಕನ ಬಣ್ಣ ಬಯಲಾಗಿದ್ದು, ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.
ಸಿಲಿಕಾನ್ ಸಿಟಿಯ ಹನುಮಂತನಗರದ ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ ಎಸ್. ಹರಿಶಂಕರ್ ಬಂಧಿತ. ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟ ಹರಿಶಂಕರ್, ‘ಡೇಟಿಂಗ್ ಆಯಪ್ನಲ್ಲಿ ನನಗೆ ಯುವತಿ ಪರಿಚಯ ಆದಳು. ಅವಳ ಮೋಹಕ ಮಾತುಗಳಿಗೆ ಮರುಳಾಗಿ ಆಕೆಯ ಬಲೆಯಲ್ಲಿ ಸೆರೆಯಾದೆ. ಆಕೆ ಕೇಳಿದಾಗಲೆಲ್ಲಾ, ಆಕೆ ಹೇಳಿದ ಬ್ಯಾಂಕ್ ಖಾತೆಗಳಿಗೆ ಗ್ರಾಹಕರ ಹೆಸರಿನಲ್ಲಿ ಸಾಲದ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ಡೇಟಿಂಗ್ ಯುವತಿಗೆ ಕಳಿಸಿಬಿಟ್ಟೆ. ಅವಳ ಪ್ರೇಮಪಾಶಕ್ಕೆ ಒಳಗಾಗಿ ಮಾಡಬಾರದ್ದು ಮಾಡಿಬಿಟ್ಟೆ. ಬರೋಬ್ಬರಿ 5.70 ಕೋಟಿ ರೂ. ಕೊಟ್ಟು ಕೈ ಸುಟ್ಟಿಕೊಂಡೆ…’ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಹನುಮಂತನಗರ ಇಂಡಿಯನ್ ಬ್ಯಾಂಕ್ನಲ್ಲಿ ಅನಿತಾ ಎಂಬುವರು 1.32 ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರ ಆಧಾರದ ಮೇಲೆ ಅನಿತಾ, 75 ಲಕ್ಷ ರೂ. ಸಾಲ ಪಡೆದಿದ್ದರು. ಆನಂತರ ಹರಿಶಂಕರ್, ಕೌಶಲ್ಯ ಮತ್ತು ಮುನಿರಾಜು ಒಳಸಂಚು ರೂಪಿಸಿ ಅನಿತಾ ಅವರ ಠೇವಣಿ ಖಾತೆಯ ಲೀನ್ ಮಾರ್ಕ್ ಅನ್ನು ಅನಧಿಕೃತವಾಗಿ ಅಳಿಸಿ ಅವರ ಠೇವಣಿ ಹಣದ ಆಧಾರದ ಮೇಲೆ ಮೇ 13 ರಿಂದ 19ರ ನಡುವೆ ಓವರ್ ಡ್ರಾಫ್ಟ್ನಲ್ಲಿ ಹಣ ಮಂಜೂರು ಮಾಡಿದ್ದರು. ಎಲ್ಲ ಓವರ್ ಡ್ರಾಫ್ಟ್ಗಳಿಗೂ ಅನಿತಾ ಅವರ 1.32 ಕೋಟಿ ರೂ. ಠೇವಣಿ ಹಣವನ್ನೇ ಆಧಾರವಾಗಿ ತೋರಿಸಿ 5.70 ಕೋಟಿ ರೂ. ಓವರ್ ಡ್ರಾಫ್ಟ್ ಖಾತೆಗಳನ್ನು ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ಹಣವನ್ನು ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆಗಳಿಗೆ ಮತ್ತು ರಾಜ್ಯ 2 ಖಾತೆ ಒಟ್ಟು 30 ಬ್ಯಾಂಕ್ ಖಾತೆಗಳಿಗೆ ಕೇವಲ 6 ದಿನಗಳ ನಡುವೆ 136 ಬಾರಿ ವರ್ಗಾವಣೆ ಮಾಡಿದ್ದಾರೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ಬಂದು ಪ್ರಶ್ನಿಸಿದ್ದಾರೆ. ಆನಂತರ ಆಂತರಿಕ ತನಿಖೆ ನಡೆಸಿದಾಗ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದಿರುವುದು ಗೊತ್ತಾಗಿದೆ.
5.70 ಕೋಟಿ ರೂ. ದುರುಪಯೋಗ ಆರೋಪದ ಮೇಲೆ ಇಂಡಿಯನ್ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಡಿ.ಎಸ್. ಮೂರ್ತಿ ದೂರು ನೀಡಿದ್ದರು. ಇದರ ಆಧಾರದ ಮೇಲೆ ವ್ಯವಸ್ಥಾಪಕ ಹರಿಶಂಕರ್, ಸಹಾಯಕ ವ್ಯವಸ್ಥಾಪಕಿ ಕೌಶಲ್ಯ ಜರಾಯ್ ಮತ್ತು ಕ್ಲರ್ಕ್ ಮುನಿರಾಜು ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹರಿಶಂಕರ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 10 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ.