ಸಮಗ್ರ ನ್ಯೂಸ್: ಸುಮಾರು 15 ವರ್ಷ ಹಿಂದೆ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ಮೂಲಕ ಅಡಕೆ ಪ್ರಪಂಚಕ್ಕೆ ಪರಿಚಯಗೊಂಡ ಕುಬ್ಜ ತಳಿ ಇದೀಗ ಬೇಡಿಕೆ ಹೆಚ್ಚಿಸಿಕೊಂಡಿದೆ.
ವಿಶೇಷ ಯೋಜನೆಯೊಂದರ ಅಡಿಯಲ್ಲಿ ಕುಬ್ಜ ತಳಿಯ ಎರಡು ಮಾದರಿ ತೋಟಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ರೂಪಿಸಲಾಗಿದ್ದು, ಇದೀಗ ಇನ್ನಷ್ಟು ಮಾದರಿ ತೋಟಗಳ ರಚನೆಯತ್ತ ಒಲವು ವ್ಯಕ್ತವಾಗಿದೆ. ವಿಟ್ಲ ಸಿಪಿಸಿಆರ್ಐನ ತಳಿ ಅಭಿವೃದ್ಧಿ ವಿಭಾಗದ ವಿಜ್ಞಾನಿ ನಾಗರಾಜ್ ಪ್ರಕಾರ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ಆಂಧ್ರ ಪ್ರದೇಶ ಸೇರಿದಂತೆ ದೇಶದ ಸುಮಾರು ಹತ್ತು ರಾಜ್ಯಗಳಿಂದ ಕುಬ್ಜ ತಳಿಗೆ ಬೇಡಿಕೆ ಇದೆ. ಇದರೊಂದಿಗೆ ದಕ್ಷಿಣ ಕನ್ನಡದ ರೈತರ ವಲಯದಲ್ಲೂ ಮಾದರಿ ತೋಟ ರಚನೆಗೆ ಬೇಡಿಕೆ ಇದೆ.
ಏನಿದು ಮಾದರಿ ತೋಟ?
ಅಡಕೆ ಮತ್ತು ಸಾಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಕಲ್ಲಿಕೋಟೆ ಯೋಜನೆಯಡಿ 2019ರಲ್ಲಿ ಮಾದರಿ ತೋಟ ಜಾರಿಗೆ ಬಂದಿತ್ತು. ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಸುರೇಶ್ ಕುಮಾರ್ ಸೊರಕೆ ಹಾಗೂ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಗಣೇಶ್ ರೈ ಎಂಬವರ ಜಮೀನಿನಲ್ಲಿ ಸಿಪಿಸಿಆರ್ಐ ನೇತೃತ್ವದಲ್ಲಿ ಕುಬ್ಜ ತಳಿಯ ಮಾದರಿ ತೋಟ ರಚಿಸಲಾಗಿತ್ತು. ಎರಡೂ ಕಡೆ ಒಟ್ಟು 600 ಗಿಡ ನಾಟಿ ಮಾಡಲಾಗಿದ್ದು, ಯಶಸ್ವಿ ಅನುಷ್ಠಾನಗೊಂಡಿದೆ. ಮೂರು ವರ್ಷಗಳ ಪ್ರಾಜೆಕ್ಟ್ ಮುಗಿದಿರುವ ಕಾರಣ ಮಾದರಿ ತೋಟ ವಿಸ್ತರಣೆಯಾಗಿಲ್ಲ. ಈ ಪ್ರಾಜೆಕ್ಟ್ ಮರು ಜಾರಿಯಾದರೆ ಇನ್ನಷ್ಟು ರೈತರ ಜಮೀನುಗಳಲ್ಲಿ ಕುಬ್ಜ ತಳಿಯ ಮಾದರಿ ತೋಟ ಮಾಡಲಾಗುವುದು ಎನ್ನುತ್ತಾರೆ ವಿಜ್ಞಾನಿಗಳು.
ಏನಿದು ಕುಬ್ಜ ತಳಿ?
‘ವಿಟಿಎಲ್ಎಎಚ್-1’ ಮತ್ತು ‘ವಿಟಿಎಲ್ಎಎಚ್-2’ ಎಂಬ ಹೆಸರಿನ ಎರಡು ಕುಬ್ಜ ತಳಿಯ ಅಡಕೆ ಗಿಡಗಳನ್ನು 2006-07ರಲ್ಲಿ ಬಿಡುಗಡೆ ಮಾಡಲಾಗಿತ್ತು. ಭೂಮಿ ಮಟ್ಟದಿಂದ ಒಂದಡಿ ಎತ್ತರಕ್ಕೆ ಬೆಳೆದಲ್ಲಿಂದಲೇ ಫಸಲು ಕೊಡುವ ಈ ಹೈಬ್ರಿಡ್ ತಳಿಯ ಗಿಡಗಳು 15 ವರ್ಷಗಳ ತಮ್ಮ ಬದುಕಿನಲ್ಲಿ ಈಗಲೂ ನಿಂತುಕೊಂಡೇ ಗೊನೆ ಕೊಯ್ಯಬಹುದಾದಷ್ಟು ಗಿಡ್ಡ ಮರಗಳಾಗಿವೆ. ನಿರ್ವಹಣೆ, ಔಷಧ ಸಿಂಪರಣೆ, ಕೊಯ್ಲು ಸುಲಭ. ಆದರೆ ಎತ್ತರ ತಳಿಯ ಮರಗಳಿಗಿಂತ ಕಡಿಮೆ ಇಳುವರಿ ಕೊಡುತ್ತದೆ ಎಂಬುದು ಇದರ ಮಿತಿ. ಎತ್ತರದ ಮರವೊಂದು ವರ್ಷಕ್ಕೆ 4 ಕೆಜಿವರೆಗೆ ಅಡಕೆ ನೀಡಿದರೆ, ಇದು ಎರಡೂವರೆ ಕೆಜಿ ಅಷ್ಟೇ ನೀಡುತ್ತದೆ.
ಎರಡು ವರ್ಷ ಹಿಂದೆ ನಮ್ಮ ಜಮೀನಿನಲ್ಲಿ 360 ಕುಬ್ಜ ತಳಿಯ ಗಿಡಗಳನ್ನು ನಿರ್ದೇಶನಾಲಯದ ಪ್ರಾಜೆಕ್ಟ್ ಪ್ರಕಾರ ನಾಟಿ ಮಾಡಲಾಗಿದೆ. ಶೀಘ್ರದಲ್ಲೇ ಫಸಲು ನಿರೀಕ್ಷೆ ಇದೆ. ಇದು ಅಪೂರ್ವ ಅನುಭವ ನೀಡಿದೆ ಎನ್ನುತ್ತಾರೆ ಕುಬ್ಜ ತಳಿಯ ಮಾದರಿ ತೋಟ ನಿರ್ಮಾಣ ಮಾಡಿರುವ ಪ್ರಗತಿಪರ ರೈತ ಪುತ್ತೂರಿನ ಸುರೇಶ್ ಕುಮಾರ್ ಸೊರಕೆ.
ಕೃಪೆ: ವಿಜಯ ಕರ್ನಾಟಕ