ಬೆಂಗಳೂರು, (ಜ.19): ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕೇಳಿ ಬಂದಿದೆ.
ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಮಹಿಳೆಯೊಬ್ಬರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಗಲಾಟೆ ವಿಷಯಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆ ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದ್ದು ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಲಂಚ ನೀಡಬೇಕು ಅಥವಾ ಮಂಚಕ್ಕೆ ಬರಬೇಕೆಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ.
ನೊಂದ ಮಹಿಳೆ ನಗರ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದು, ಇನ್ಸ್‌ಪೆಕ್ಟರ್ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಹೆಣ್ಣೂರಿನ ಶಕ್ತಿ ನಗರ ನಿವಾಸಿಯೊಬ್ಬರು ತಮ್ಮ ಮನೆಯನ್ನು ಕೆಲ ವರ್ಷಗಳ ಹಿಂದೆ ವರಲಕ್ಷ್ಮಿಗೆ ಲೀಸ್ ನೀಡಿದ್ದರು. ಲೀಸ್ ಹಣವಾಗಿ 7 ಲಕ್ಷ ರೂ. ಹಣವನ್ನು ಪಡೆದಿದ್ದರು. ಆದರೆ ನೀರಿನ ಬಿಲ್ ಮಾತ್ರ 1 ವರ್ಷದಿಂದ ಕಟ್ಟಿರಲಿಲ್ಲ. ವಾಟರ್ ಬಿಲ್ ಕೇಳಲು ಮನೆ ಮಾಲೀಕರಾದ ಸಂತ್ರಸ್ತೆ ಹೋಗಿದ್ದರು.
ಈ ವೇಳೆ ಗಲಾಟೆ ತೆಗೆದು ವರಲಕ್ಷ್ಮೀ ಹಾಗೂ ಅವರ ಗುಂಪು ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿಗಳಿಂದ ಸಂತ್ರಸ್ತೆ ತಪ್ಪಿಸಿಕೊಂಡು ಬಂದಿದ್ದಾರೆ. ನಂತರ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ಮಹಿಳೆ ಎಂದು ನೋಡದೇ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ಲಂಚ ನೀಡಬೇಕು ಅಥವಾ ಮಂಚಕ್ಕೆ ಬರಬೇಕೆಂದು ಕರೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ನ ಈ ವರ್ತನೆ ಇಲಾಖೆಗೆ ಮುಜುಗರ ತರಿಸಿದೆ.