ರಾಯ್ಪುರ: ಹಸುವೊಂದು ಮೂರು ಕಣ್ಣು ಮತ್ತು ನಾಲ್ಕು ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರುವಿಗೆ ಜನ್ಮ ನೀಡಿರುವ ಘಟನೆ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ.
ಸದ್ಯ ಮೂರು ಕಣ್ಣಿನ್ನು ಹೊಂದಿರುವ ಕರುವನ್ನು ನೋಡಲು ದೂರದ ಊರುಗಳಿಂದ ಜನ ಜಮಾಯಿಸುತ್ತಿದ್ದು, ಎಲ್ಲರೂ ಕರುವಿಗೆ ಹೂವಿನ ಮಾಲೆ ಹಾಕಿ, ಕಾಣಿಕೆ ರೂಪದಲ್ಲಿ ಹಣವನ್ನು ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ ಪಶು ವೈದ್ಯರು ಕರು ಸರಿಯಾಗಿ ಬೆಳವಣಿಗೆಯಾಗದ ಕಾರಣ ಹೀಗೆ ಜನಿಸಿದೆ ಎನ್ನುತ್ತಿದ್ದಾರೆ.
ಜನವರಿ 14 ರಂದು ಸಂಜೆ 7 ಗಂಟೆ ಸುಮಾರಿಗೆ ಹಸು ಕರುವಿಗೆ ಜನ್ಮ ನೀಡಿದ್ದು, ಅಂದು ಮಕರ ಸಂಕ್ರಾಂತಿ ಹಬ್ಬದವಾಗಿದ್ದರಿಂದ ಕರುವಿನ ಜನನದ ಮೇಲೆ ಎಲ್ಲರಿಗೂ ನಂಬಿಕೆ ಹೆಚ್ಚಾಗಿದೆ. 3 ಕಣ್ಣಿನ ಕರುವನ್ನು ನೋಡಲು ಜನ ಮುಗಿಬೀಳುತ್ತಿದ್ದು, ಗ್ರಾಮಸ್ಥರು ದೀಪ ಹಚ್ಚಿ, ತೆಂಗಿನಕಾಯಿ ಒಡೆದು ಕರು ಮಹಾದೇವನ ರೂಪ ತಾಳಿದೆ ಎಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ರೈತ ಹೆಮಂತ್ ಚಂದೇಲ್ ಅವರು ಕೃಷಿ ಕೆಲಸದ ಜೊತೆಗೆ ಹಸು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದು, ಜರ್ಸಿ ಹಸುವನ್ನು ಸಾಕಿದ್ದಾರೆ. ಸಂಕ್ರಾತಿ ಹಬ್ಬದಂದು ಹಸು ಕರುವಿಗೆ ಜನ್ಮ ನೀಡಿದ್ದು, ಎರಡು ಕಣ್ಣುಗಳ ಮಧ್ಯೆ ಹಸುವಿನ ಹಣೆಯ ಮೇಲೆ ಮತ್ತೊಂದು ಕಣ್ಣಿದೆ. ವಿಶೇಷವೆಂದರೆ ಈ ಹಸು ಎರಡು ಮೂಗಿನ ರಂಧ್ರಗಳ ಬದಲಿಗೆ 4 ರಂಧ್ರಗಳನ್ನು ಹೊಂದಿದೆ ಹಾಗೂ ಅದರ ಬಾಲ ಜಡೆಯ ಮಾದರಿ ಇದೆ ಎಂದು ಹೇಳಲಾಗುತ್ತಿದೆ.