Ad Widget .

ಅಕ್ಷರ ಸಂತನಿಗೆ ಕೊನೆಗೂ ಒಲಿದ ಪದ್ಮಶ್ರೀ| ನ.8ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ|

Ad Widget . Ad Widget .

ಮಂಗಳೂರು: ಅಕ್ಷರಸಂತ ಎಂದೇ ಖ್ಯಾತಿಯಾಗಿರುವ ಹರೇಕಳ ಹಾಜಬ್ಬರಿಗೆ ಕೊನೆಗೂ ಪದ್ಮಶ್ರೀ ಗೌರವ ಲಭಿಸಿದೆ. ನವೆಂಬರ್ 8ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಹಾಜಬ್ಬರಿಗೆ ಅಧಿಕೃತ ಆಹ್ವಾನ ಬಂದಿದೆ.

Ad Widget . Ad Widget .

ಹರೇಕಳ ಹಾಜಬ್ಬರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ

2020ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಾಗಿತ್ತು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.

ಆದರೆ ಇದೀಗ ಸರ್ಕಾರ ಮತ್ತೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿದ್ದು, ದಕ್ಷಿಣ ಕನ್ನಡದ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನವದೆಹಲಿಗೆ ಬರುವಂತೆ ಆಹ್ವಾನ ಬಂದಿದೆ. ಈ ಹಿನ್ನಲೆಯಲ್ಲಿ ತನ್ನ ಸಹಾಯಕನ ಜೊತೆ ಹಾಜಬ್ಬ ದೆಹಲಿ ಪ್ರಯಾಣ ಮಾಡಲಿದ್ದಾರೆ. ನವೆಂಬರ್‌ 8ರಂದು ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಹರೇಕಳ ಹಾಜಬ್ಬರವರು ಪಾಲ್ಗೊಳ್ಳಲಿದ್ದಾರೆ.

ಹರೇಕಳ ಹಾಜಬ್ಬರು ಕಳೆದ 21 ವರ್ಷಗಳಿಂದ ತನ್ನೂರು ಹರೇಕಳದ ನ್ಯೂ ಪಡ್ಪು ಗ್ರಾಮದಲ್ಲಿ ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಇದಕ್ಕಾಗಿ ಯಾರ ಮುಂದೆಯೂ ಕಾಡಿ ಬೇಡದೇ ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣನ್ನು ಮಾರಿ, ಶಾಲೆಯ ಖರ್ಚುನ್ನು ನೋಡಿಕೊಳ್ಳುತ್ತಿದ್ದಾರೆ.

ಸಾಮಾನ್ಯರಲ್ಲಿ ಅತೀ ಸಾಮಾನ್ಯರಂತೆ ಇರುವ ಹರೇಕಳ ಹಾಜಬ್ಬರ ವ್ಯಕ್ತಿತ್ವಕ್ಕೆ ಎಲ್ಲರೂ ಮಾರುಹೋಗಿದ್ದಾರೆ. 2004ರಲ್ಲಿ ಹರೇಕಳ ಹಾಜಬ್ಬರ ಶಿಕ್ಷಣ ಪ್ರೀತಿಯನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಆ ಬಳಿಕ ರಾಷ್ಟ್ರದ ವಿವಿಧ ಮಾಧ್ಯಮಗಳು ಹರೇಕಳ ಹಾಜಬ್ಬರನ್ನು ಗುರುತಿಸಿ ಗೌರವಿಸಿದೆ.

2020ರ ಗಣರಾಜ್ಯೋತ್ಸವದಂದು ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಬಗ್ಗೆ ದೆಹಲಿಯಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ಹೇಳಿದ್ದರು. ಆದರೆ ಹಿಂದಿ ಅರ್ಥವಾಗದ ಹಾಜಬ್ಬರಿಗೆ ಸಂಜೆಯವರೆಗೂ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಚಾರವೇ ಗೊತ್ತಾಗಿಲ್ಲ. ಆ ಬಳಿಕ ಮಾಧ್ಯಮದ ಪ್ರತಿನಿಧಿಗಳು ಹಾಜಬ್ಬರಿಗೆ ಶುಭಾಶಯ ಸಲ್ಲಿಸಿದಾಗ ಹಾಜಬ್ಬರಿಗೆ ತನಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ತಿಳಿದುಬಂದಿತ್ತು.

ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ

2004ರಲ್ಲಿ ಕನ್ನಡ ಪತ್ರಿಕೆಯೊಂದು ಹಾಜಬ್ಬರನ್ನು ವರ್ಷದ ವ್ಯಕ್ತಿ ಎಂದು ಪ್ರಶಸ್ತಿ ನೀಡಿ ಗುರುತಿಸುವ ಮೂಲಕ ಹಾಜಬ್ಬ ಬೆಳಕಿಗೆ ಬಂದಿದ್ದರು. ಬಳಿಕ ದೆಹಲಿಯ ಸಿಎನ್‍ಎನ್- ಐಬಿಎನ್ ರಿಯಲ್ ಹೀರೋ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಂಗಳೂರು ವಿಶ್ವವಿದ್ಯಾನಿಲಯ ಇರುವ ಕೊಣಾಜೆ ಸಮೀಪದ ಹರೇಕಳದಲ್ಲಿ ಗ್ರಾಮೀಣ ಮಕ್ಕಳಲ್ಲಿ ಶಾಲೆಯ ಸೌಲಭ್ಯ ಇರಲಿಲ್ಲ. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.

ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ವಿದೇಶಿ ಮಹಿಳೆಯ ಆಂಗ್ಲ ಭಾಷೆಯ ಪ್ರಶ್ನೆಗೆ ಉತ್ತರ ನೀಡಲಾಗದ ಹಾಜಬ್ಬರಿಗೆ ಶಿಕ್ಷಣದ ಮಹತ್ವ ಅರಿವಾಗಿತ್ತು. ಅಂದೇ ಹಾಜಬ್ಬರು ಶಾಲೆ ಕಟ್ಟುವ ನಿರ್ಣಯ ಮಾಡಿದ್ದರು. ಇದೀಗ ಅವರ ನಿಸ್ವಾರ್ಥ ಸೇವೆಗೆ ಅತ್ಯುನ್ನತ ಪ್ರಶಸ್ತಿ ಲಭಿಸಿದ್ದು, ಮುಂದೆಯೂ ಇನ್ನಷ್ಟು ಪ್ರಶಸ್ತಿಗಳು ದೊರಕಲಿ ಎನ್ನುವುದು ಹಾಜಬ್ಬ ಅಭಿಮಾನಿಗಳ ಹಾರೈಕೆ.

Leave a Comment

Your email address will not be published. Required fields are marked *