ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ರಾಜ್ಯಾದ್ಯಂತ ಹಲವು ಗಣಪತಿ ಆಲಯಗಳಿದ್ದರೂ, ಅದರಲ್ಲಿ ಪ್ರಮುಖವಾಗಿರುವುದು ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರ. ವಿಘ್ನ ನಿವಾರಕನ ಆರಾಧ್ಯ ಸ್ಥಾನ, ಸಾಕ್ಷತ್ ಗಣಪತಿಯೇ ನೆಲೆ ನಿಂತಿರುವ ಪುಣ್ಯ ಸ್ಥಾನ.
ತನ್ನ ಬೇಡುವ ಭಕ್ತರ ಅಭೀಷ್ಠೆಯನ್ನು ನೆರವೇರಿಸುವ, ತನ್ನನ್ನು ನಂಬಿದವರನ್ನು ಎಂದೂ ಕೈ ಬಿಡದ, ಗಣೇಶನ ನೆಲೇಬಿಡೇ ಸೌತಡ್ಕ ಮಹಾಗಣಪತಿ ಕ್ಷೇತ್ರ. ಬಯಲು ಆಲಯದಲ್ಲಿ ವಿರಾಜಮಾನನಾಗಿರುವ ಗಣಪತಿಯ ಕ್ಷೇತ್ರ ಮಹಾತ್ಮೆಯೇ ಅಪಾರವಾಗಿದೆ.
ಕಾರಣಿಕ ಕ್ಷೇತ್ರ ಸೌತಡ್ಕ ಮಹಾಗಣಪತಿ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ತೆರಳುವ ಕೊಕ್ಕಡ ಸಮೀಪದಲ್ಲೇ ಇದೆ. ಧರ್ಮಸ್ಥಳದಿಂದ 17 ಕಿ.ಮೀ ದೂರದಲ್ಲಿರುವ ಸೌತಡ್ಕ ಮಹಾಗಣಪತಿ ಕ್ಷೇತ್ರ ಭಕ್ತರ ಪಾಲಿಗೆ ಶ್ರದ್ಧೆಯ ಭಕ್ತಿ ಕೇಂದ್ರವೂ ಹೌದು. ಸುತ್ತಲೂ ಗಂಟೆಗಳ ರಾಶಿ, ಪ್ರಶಾಂತವಾದ ವಾತಾವರಣ, ಪ್ರಕೃತಿಯ ಮಧ್ಯದಲ್ಲೇ ಪ್ರಥಮ ವಂದಿತ ಗಣಪತಿ ನೆಲೆ ನಿಂತಿದ್ದಾನೆ.
ಈ ಮಹಾಗಣಪತಿ ನಂಬಿದವರ ಪಾಲಿನ ಆರಾಧ್ಯ ದೈವ.
ಭಕ್ತರನ್ನು ಹತ್ತಿರಂದಿಂದಲೇ ದರ್ಶನ ಭಾಗ್ಯ ನೀಡುವ ಮಹಾಗಣಪತಿ ತನ್ನ ಕಾರಣಿಕದಿಂದಲೇ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆದಿದ್ದಾನೆ. ತನ್ನೆದುರಲ್ಲಿ ನಿಂತು ತನ್ಮಯರಾಗಿ, ಭಕ್ತಿ ಭಾವದಿಂದ ಗಣಪತಿಯನ್ನು ಆರಾಧಿಸಿದರೆ ಸಾಕು ಎಲ್ಲಾ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ಅಖಿಲಾಂಡ ಕೋಟಿಯ ಹೃದಯದಲ್ಲಿ ನೆಲೆಸಿರುವ ಮಹಾಗಣಪತಿ ನಂಬಿದವರ ಪಾಲಿನ ಆರಾಧ್ಯ ದೇವರಾಗಿದ್ದಾನೆ.
ಅತ್ಯಂತ ಸರಳವಾಗಿರುವ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಹರಕೆಯೂ ಕೂಡಾ ಅತೀ ಸರಳವಾಗಿರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ-ಬಂಗಾರಗಳ ಹರಕೆಯನ್ನು ಸಮರ್ಪಿಸುವುದು ಸಾಮಾನ್ಯವಾಗಿದ್ದರೆ, ಈ ಗಣೇಶನಿಗೆ ನೀಡಬೇಕಾಗಿರುವುದು ಕೇವಲ ಘಂಟೆಯನ್ನಷ್ಟೇ. ಈ ಕಾರಣಕ್ಕಾಗಿಯೇ ಇಲ್ಲಿ ಘಂಟೆಗಳ ಹರಕೆ ವಿಶಿಷ್ಟ ಸೇವೆಯಾಗಿಯೂ ಗುರುತಿಸಲ್ಪಟ್ಟಿದೆ. ತಾವು ಬೇಡಿಕೊಂಡ ಬೇಡಿಕೆ ಈಡೇರಿಸಿದ ಬಳಿಕ ಇಲ್ಲಿಗೆ ಭಕ್ತಾಧಿಗಳು ಗಂಟೆಯನ್ನು ಸಮರ್ಪಿಸುತ್ತಾರೆ, ದಿನವೊಂದಕ್ಕೆ ನೂರರಿಂದ ಅಧಿಕ ಗಂಟೆಗಳು ಕ್ಷೇತ್ರದಲ್ಲಿ ಸಮರ್ಪಿತವಾಗುತ್ತದೆ.
ಹರಕೆ ರೂಪದಲ್ಲಿ ಘಂಟೆ
ಅತೀ ಸಣ್ಣ ಗಂಟೆಯಿಂದ ಆರಂಭಗೊಂಡು, ನೂರು ಕೆಜಿಯವರೆಗಿನ ದೊಡ್ಡ ದೊಡ್ಡ ಘಂಟೆಗಳೂ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಹರಿದು ಬರುತ್ತದೆ. ಭಕ್ತರು ತಮ್ಮ ಅಭೀಷ್ಠೆ ನೆರವೇರಿದ ಬಳಿಕ ಕ್ಷೇತ್ರಕ್ಕೆ ಬಂದು ಗಂಟೆ ಸಮರ್ಪಣೆ ಮಾಡಿ ಹೋಗುತ್ತಾರೆ. ಅಷ್ಟಕ್ಕೂ ಕಷ್ಟಗಳು ನಿವಾರಣೆಯಾದ ಬಳಿಕ ಘಂಟೆಯನ್ನು ದೇವಸ್ಥಾನದಲ್ಲಿ ಕಟ್ಟುವುದು ಇಲ್ಲಿನ ಸಂಪ್ರದಾಯವಾಗಿರುವುದರಿಂದ ಇಲ್ಲಿ ಕಟ್ಟಿರುವ ಘಂಟೆಗಳೇ ಭಕ್ತರ ಕಷ್ಟ ದೂರವಾಗಿರುವುದಕ್ಕೆ ಸಾಕ್ಷಿ ನುಡಿಯುತ್ತದೆ. ಪ್ರತಿ ವರ್ಷ 11 ಟನ್ ಘಂಟೆಗಳು ಕ್ಷೇತ್ರಕ್ಕೆ ಬರುತ್ತಿವೆ ಅಂದರೆ ನೀವು ನಂಬಲೇಬೇಕು.
ಗೋವುಗಳನ್ನು ಮೇಯಿಸುತ್ತಿದ್ದ ಮಕ್ಕಳಿಗೆ ಸಿಕ್ಕಿದ ಗಣೇಶ
ಬಯಲು ಆಲಯದಲ್ಲೇ ಇರುವ ಈ ಮಹಾಗಣಪತಿಯ ವಿಗ್ರಹ ಗೋವುಗಳನ್ನು ಮೇಯಿಸುತ್ತಿದ್ದ ಮಕ್ಕಳಿಗೆ ಸಿಕ್ಕಿತಂತೆ. ಆ ಮಕ್ಕಳು ಈ ಗಣಪತಿಗೆ ಸೌತೆಯಿಂದಲೇ ನೈವೇಧ್ಯ ಸಲ್ಲಿಸುತ್ತಿದ್ದರು. ಕ್ರಮೇಣ ಇದರಿಂದಲೇ ಸೌತಡ್ಕ ಎಂಬ ಹೆಸರು ಬಂತೆದ್ದು ಪ್ರತೀತಿ. ಊರಿನ ಪ್ರಮುಖನೋರ್ವ ಗಣಪತಿಗೆ ಆಲಯ ಕಟ್ಟಬೇಕೆಂಬ ಆಶಯದಿಂದ ಅದಕ್ಕಾಗಿ ಸಿದ್ಧತೆಗಳನ್ನು ನಡೆಸಿದ್ದ. ಆದರೆ ರಾತ್ರಿ ಕನಸಿನಲ್ಲಿ ಬಂದ ಗಣಪತಿ ತನ್ನ ಆಲಯವನ್ನು ನಿರ್ಮಾಣ ಮಾಡುವುದಾದರೆ 24 ಗಂಟೆಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಕಾಣುವಷ್ಟು ಎತ್ತರದ ಆಲಯವನ್ನು ನಿರ್ಮಾಣ ಮಾಡಬೇಕು ಅಂತಾ ಹೇಳಿಬಿಟ್ಟನಂತೆ. ಮಾರನೇ ದಿನ ದೈವಿಕ ಪ್ರಶ್ನೆ ಮೂಲಕ ಈ ವಿಚಾರವನ್ನು ಚಿಂತನೆ ನಡೆಸಿದಾಗ ಇದೇ ವಿಚಾರವು ಬೆಳಕಿಗೆ ಬಂದಿದೆ. ಹೀಗಾಗಿ ಗಣಪತಿಗೆ ಆಲಯ ಕಟ್ಟುವ ನಿರ್ಧಾರವನ್ನೇ ಕೈ ಬಿಟ್ಟರೆಂದು ಹೇಳಲಾಗುತ್ತಿದೆ.
ಚೌತಿ ಸಂದರ್ಭ ವಿಶೇಷ ಪೂಜೆ ಪುನಸ್ಕಾರ
ಇನ್ನು ಚೌತಿ ಸಂದರ್ಭ ವಿಶೇಷ ಪೂಜೆ ಪುನಸ್ಕಾರಗಳು ಗಣಪತಿಗೆ ಸಲ್ಲಿಕೆಯಾಗುತ್ತವೆ. ಸಾವಿರಾರು ಭಕ್ತರು ಆಗಮಿಸಿ ಗಣಪನ ದರ್ಶನ ಪಡೆಯುತ್ತಾರೆ. ಇನ್ನು ಇಲ್ಲಿ ಅವಲಕ್ಕಿ ಪ್ರಸಾದ ವಿಶೇಷ ಸೇವೆಯಾಗಿದ್ದು, ಹೆಚ್ಚಿನ ಭಕ್ತರು ಇದನ್ನು ಮಾಡಿಸುತ್ತಾರೆ. ಇದರ ಜೊತೆ ರಂಗಪೂಜೆ ನಿರಂತರವಾಗಿ ನಡೆಯುತ್ತದೆ. ಇಲ್ಲಿ ಬರುವ ವಾನರಗಳಿಗೆ ಇದೇ ಪ್ರಸಾದ ಆಹಾರ ರೂಪದಲ್ಲಿ ನೀಡಲಾಗುತ್ತದೆ. ಒಟ್ಟಿನಲ್ಲಿ ಸಕಲ ಭಕ್ತರನ್ನು ಹರಸುವ, ಸಕಲ ಭಕ್ತರ ಇಷ್ಟಾರ್ಥ ನೆರವೇರಿಸುವ ಸೌತಡ್ಕ ಮಹಾಗಣಪತಿ ಕ್ಷೇತ್ರ ಅತ್ಯಂತ ಪವಿತ್ರ, ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಗುರುತಿಸಿಕೊಂಡಿದೆ.