ಸುಳ್ಯ : ಬೆಳ್ಳಾರೆಯ ಉದ್ಯಮಿ ರಾಜೇಶ್ ಗುಂಡಿಗದ್ದೆ (47) ಯವರು ಸೆ. 4 ರಿಂದ ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ವಿನಯಶ್ರೀಯವರು ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎರಡು ದಿನ ಕಳೆದರೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೆ. 5 ರಂದು ರಾಜೇಶ್ ಪತ್ನಿ ವಿನಯಶ್ರೀ ಅವರು ಠಾಣೆಗೆ ದೂರು ನೀಡಿದ್ದು, ಸುಳ್ಯ ಪೇಟೆಗೆ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ಅದರಲ್ಲಿ ತಿಳಿಸಲಾಗಿದೆ.
ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕೃಷಿಕರಾಗಿರುವ ರಾಜೇಶ್ ರವರು ತಮ್ಮ ಇಕೋ ಸ್ಪೋರ್ಟ್ಸ್ ಕಾರು ( ಕೆಎ 21 ಪಿ 6758)ನಲ್ಲಿ ಸೆ.4ರಂದು ಮನೆಯಿಂದ ತೆರಳಿದ್ದಾರೆ. ಸುಳ್ಯ ಕ್ಕೆ ಆಗಮಿಸಿದ ಅವರು ಬಳಿಕ ಕಲ್ಲುಗುಂಡಿ ಪೇಟೆಯಾಗಿ ಸಂಪಾಜೆ ಕಡೆಗೆ ಪ್ರಯಾಣಿಸಿರುವ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿರುವ ಬಗ್ಗೆ ಹಾಗೂ ಬಂದಡ್ಕ ಟವರ್ ನಲ್ಲಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ತಾಲೂಕಿನ ಬೆಳ್ಳಾರೆಯಲ್ಲಿರುವ ರಬ್ಬರ್ ಉತ್ಪಾದಕರ ಸಂಘಕ್ಕೆ ರಾಜೇಶ್ ಅಧ್ಯಕ್ಷರಾಗಿದ್ದು, ಈ ಸಂಘದಲ್ಲಿ ಬೆಳ್ಳಾರೆಯ ಸುತ್ತಮುತ್ತಲಿನ ಗ್ರಾಮಗಳ ರಬ್ಬರು ಬೆಳೆಗಾರರಿಂದ ರಬ್ಬರ್ ಹಾಲನ್ನು ಖರೀದಿಸಿ ಕೆಲ ದಿನ ಬಿಟ್ಟು ಹಣ ನೀಡುವ ಪರಿಪಾಠ ಬೆಳೆಸಿಕೊಂಡಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಸಂಘವು ನಷ್ಟದತ್ತ ಸಾಗಿದ್ದು ಹಾಲು ಹಾಕಿದ ಬೆಳೆಗಾರರಿಗೆ ಕೋಟಿ ಮೀರಿ ಹಣ ಕೊಡಲು ಬಾಕಿ ಇದೆ ಎನ್ನಲಾಗುತ್ತಿದೆ . ಇದರ ಜತೆಗೆ ಸಂಘದ ಹೆಸರಲ್ಲಿ ಪಡೆದ ಸಾಲ , ಭೂಮಿ ಖರೀದಿ ಮತ್ತು ಅಭಿವೃದ್ಧಿಗೆ ಸೇರಿದಂತೆ ತಮ್ಮ ವೈಯಕ್ತಿಕ ನೆಲೆಯಲ್ಲಿ ರಾಜೇಶ್ ಮಾಡಿದ ಸಾಲವೂ ವಿಪರೀತವಾಗಿತ್ತು ಎನ್ನಲಾಗಿದೆ. ಸಂಘದ ಹೆಸರಿನಲ್ಲಿರುವ ಸಾಲ ಮರುಪಾವತಿಸುವಂತೆ ಸಂಘದ ಕಟ್ಟಡದಲ್ಲಿ ಸ್ಥಳೀಯ ಬ್ಯಾಂಕೊಂದು ನೋಟೀಸ್ ಅಂಟಿಸಿದೆಯೆಂದು ಕೂಡ ಹೇಳಲಾಗುತ್ತಿದ್ದು ಆ ಬ್ಯಾಂಕಲ್ಲಿ ಸುಮಾರು 1.3 ಕೋಟಿ ರೂ. ಸಾಲವಿದೆ ಎಂದು ಹೇಳಲಾಗುತ್ತಿದೆ.
ಕೆಲ ಮೂಲಗಳ ಪ್ರಕಾರ, ಸಂಘ ನಷ್ಟದಿಂದ ನಡೆಯುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಕಂಪೆನಿಯೊಂದಕ್ಕೆ ಅದನ್ನು ಮಾರಾಟ ಮಾಡಿ ಬೆಳೆಗಾರರಿಗೆ ಹಣ ಪಾವತಿಸುವ ನಿರ್ಣಯಕ್ಕೆ ಸಂಘದ ಮಹಾಸಭೆಯೂ ಬಂದಿದ್ದು ಅದರಂತೆ ಒಬ್ಬರು ಖರೀದಿದಾರರು ಮುಂದೆ ಬಂದು ಮುಂಗಡ ಹಣ ಕೂಡ ಪಾವತಿಸಿದ್ದು, ಬಳಿಕ ಸಂಘದ ನಷ್ಟವನ್ನು ಸರಿದೂಗಿಸಲಾಗದು ಎಂದು ವ್ಯವಹಾರ ಕೈಬಿಟ್ಟಿರುವುದಾಗಿಯೂ ಸುದ್ದಿಯಾಗಿದೆ.
ಈ ಹಿನ್ನೆಲೆಯಲ್ಲಿ ರಾಜೇಶರಿಗೆ ಹಣ ಪಾವತಿಸಲು ಜನರಿಂದ ಒತ್ತಡ ಏರುತ್ತಾ ಹೋದಂತೆ ನಾಪತ್ತೆಯಾಗಿದ್ದಾರೆ ಎಂದು ಹೇಳುತ್ತಿದ್ದೂ, ಸಂಘಕ್ಕೆ ಹಾಲು ಸುರಿದ ಹಲವು ಕೃಷಿಕರಿಗೆ, ಸಾಲಕೊಟ್ಟ ಹಣಕಾಸು ಸಂಸ್ಥೆಗಳಿಗೆ ಆರ್ಥಿಕ ನಡುಕ ಉಂಟಾಗಿದೆ.