ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬೆನ್ನಲ್ಲೇ ನೂರಾರು ನಿವಾಸಿಗಳ ತಾಯ್ನಾಡಾದ ಅಫ್ಘಾನಿಸ್ತಾನವನ್ನು ತೊರೆಯಲು ಆರಂಭಿಸಿದ್ದಾರೆ, ಇದೇ ವೇಳೆ ವಿಮಾನಕ್ಕೆ ಏರುತ್ತಿದ್ದಂತೆ ಮೂರು ಜನ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ವಿಮಾನ ಹತ್ತಲು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಸ್ ಹತ್ತಲು ಪ್ರಯಾಣಿಕರು ಹೇಗೆ ಮುಗಿಬೀಳುತ್ತಾರೋ ಆ ರೀತಿಯಾಗಿ ಒಂದು ಏಣಿ ಮೂಲಕ ವಿಮಾನ ಹತ್ತಲು ಪ್ರಯತ್ನಿಸಿದ್ದಾರೆ.
ಸುರಕ್ಷಿತ ಸ್ಥಳ ತಲುಪಲು ವಿಮಾನ ಏರಿದ ಜನ ವಿಮಾನದ ಟಯರ್ ಹಿಡಿದು ಪ್ರಯಾಣ ಮಾಡಿದ್ದಾರೆ. ವಿಮಾನ ಟೇಕಾಫ್ ಆಗುತ್ತಿದ್ದಂತೆ ಗಾಳಿಯ ರಭಸಕ್ಕೆ ಕಾಬೂಲ್ ಮಧ್ಯಭಾಗದಲ್ಲಿ ಮೂವರು ಮೇಲಿನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಮಾನ ಪ್ರಯಾಣ ಬಸ್, ಪ್ಯಾಸೆಂಜರ್ ರೈಲುಗಳಂತಾಗಿದೆ. ಸಿಕ್ಕ ಸಿಕ್ಕ ವಿಮಾನ ಏರಲು ನೂಕುನುಗ್ಗಲು ಆಗಿದೆ. ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಜನರ ನೂಕುನುಗ್ಗಲು ತಪ್ಪಿಸಲು ಗುಂಡಿನ ದಾಳಿ ನಡೆಸಿ ತಾಲಿಬಾನಿಗಳ ದಾಳಿಗೆ ಐದು ಮಂದಿ ಸಾವನ್ನಪ್ಪಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ವಿಮಾನಗಳ ಹಾರಾಟಕ್ಕೆ ನಿರ್ಬಂಧಿಸಲಾಗಿದೆ. ಅಫ್ಘಾನ್ ವಾಯುಸೀಮೆಯಲ್ಲಿ ವಿಮಾನ ಹಾರಾಡದಂತೆ ಸೂಚನೆ ನೀಡಲಾಗಿದೆ.
ಧಾರವಾಡದ ಕೃಷಿ ವಿವಿ ಸಂಶೋಧನಾ ವಿಭಾಗದ ಅಘ್ಘಾನ್‌ನಿಂದ ಬಂದ 15 ವಿದ್ಯಾರ್ಥಿಗಳು ಕುಟುಂಬಸ್ಥರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. 15 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಮತ್ತೆ ಅಘ್ಘಾನ್‌ಗೆ ವಾಪಸ್ ಆಗಿದ್ದಾರೆ. ಕುಟುಂಬಸ್ಥರು ಸುರಕ್ಷಿತವಾಗಿರುವ ಬಗ್ಗೆ ವಿದ್ಯಾರ್ಥಿಗಳಿಗೆ ವಿಶ್ವಾಸ ನೀಡಲಾಗಿದೆ.