ಬೆಂಗಳೂರು: ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಆಗಸ್ಟ್ 10ರ ಒಳಗೆ ಫಲಿತಾಂಶ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆದ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದು, ಪರೀಕ್ಷೆ ಬರೆದ ಮಕ್ಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಸಲಾಯಿತು. ಇಂದು ನಡೆದ ಪರೀಕ್ಷೆಗೆ ಶೇಕಡಾ 99.65ರಷ್ಟು ಹಾಜರಾತಿಯಿತ್ತು. ಪ್ರಥಮ ಭಾಷೆಗೆ ಒಟ್ಟು 8,19,694 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದರು. ಪ್ರಥಮ ಭಾಷೆ ಪರೀಕ್ಷೆಗೆ 7,83,881ವಿದ್ಯಾರ್ಥಿಗಳು ಹಾಜರಾಗಿದ್ದರು.
ಪ್ರಥಮ ಭಾಷೆ ಪರೀಕ್ಷೆಗೆ 3350 ವಿದ್ಯಾರ್ಥಿಗಳ ಗೈರಾಗಿದ್ದಾರೆ. ದ್ವಿತೀಯ ಭಾಷೆಗೆ 8,27,988 ವಿದ್ಯಾರ್ಥಿಗಳು ನೋಂದಣಿ, ದ್ವಿತೀಯ ಭಾಷೆ ಪರೀಕ್ಷೆಗೆ 8,24,686 ಮಕ್ಕಳು ಹಾಜರಾಗಿದ್ದರು. ದ್ವಿತೀಯ ಭಾಷೆ ಪರೀಕ್ಷೆಗೆ 3302 ವಿದ್ಯಾರ್ಥಿಗಳು ಗೈರಾಗಿದ್ದಾರೆ. ತೃತೀಯ ಭಾಷೆಗೆ 8,17,640 ವಿದ್ಯಾರ್ಥಿಗಳು ನೋಂದಣಿ, 8,14,538 ಮಕ್ಕಳು ಹಾಜರು, 3102 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕೊವಿಡ್ ಕೇರ್ ಸೆಂಟರ್ನಲ್ಲಿ 67 ಮಕ್ಕಳು ಪರೀಕ್ಷೆ ಬರೆದಿದ್ದಾರೆ. ವಿಶೇಷ ಕೊಠಡಿಯಲ್ಲಿ 152 ಮಕ್ಕಳು ಪರೀಕ್ಷೆ ಬರೆದಿದ್ದಾರೆ ಎಂದು ಅವರು ತಿಳಿಸಿದರು.