ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರುಗಳನ್ನು ಮಲಯಾಳಂಗೆ ಬದಲಾಯಿಸಲು ಕೇರಳ ಸರ್ಕಾರ ಆದೇಶಿಸಿದೆ ಎಂದು ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಮಂಜೇಶ್ವರ ಶಾಸಕ ಸ್ಪಷ್ಟನೆ ನೀಡಿದ್ದಾರೆ.
ಗ್ರಾಮಗಳ ಹೆಸರು ಬದಲಾಯಿಸುವ ಬಗ್ಗೆ ಈವರೆಗೆ ಕೇರಳ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿ ಕಚೇರಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಈ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಮಂಜೇಶ್ವರ ಶಾಸಕ ಕೆ ಎಂ ಅಶ್ರಫ್ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದಾರೆ.
ತಾಂತ್ರಿಕ ದೋಷದಿಂದ ಕೆಲವು ಪಡಿತರ ಕಾರ್ಡ್ ಗಳಲ್ಲಿ ಗ್ರಾಮಗಳ ಹೆಸರು ಮಲಯಾಳಂನಲ್ಲಿ ನಮೂದಾಗಿದೆ. ಅದನ್ನು ಶೀಘ್ರದಲ್ಲಿಯೇ ಸರಿಪಡಿಸಲಾಗುವುದು. ಆದರೆ ಗ್ರಾಮಗಳ ಹೆಸರು ಬದಲಾಯಿಸುವ ಚಿಂತನೆ ಸರ್ಕಾರದ ಮುಂದಿಲ್ಲ. ಒಂದು ವೇಳೆ ಕೇರಳ ಸರ್ಕಾರ ಇಂತಹ ನಿರ್ಧಾರಕ್ಕೆ ಬಂದರೆ ಅದರ ವಿರುದ್ಧ ಹೋರಾಟಕ್ಕೆ ನಾನು ಸಿದ್ಧ, ಕನ್ನಡ ಅಲ್ಪಸಂಖ್ಯಾತರ ಸಂವಿಧಾನಬದ್ಧ ಹಕ್ಕುಗಳ ಸಂರಕ್ಷಣೆಯಲ್ಲಿ ಸದಾ ಜಾಗೃತನಾಗಿರುತ್ತೇನೆ ಎಂದು ಅಶ್ರಫ್ ಭರವಸೆ ನೀಡಿದ್ದಾರೆ.
ಕರ್ನಾಟಕದ ಕೆಲವು ಜನಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಸುದ್ದಿಯನ್ನು ಆಧರಿಸಿ ಗೊಂದಲ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಆಧಾರದಲ್ಲಿ ಯಡಿಯೂರಪ್ಪನವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರವನ್ನು ಬರೆದಿದ್ದಾರೆ ಎಂದವರು ಹೇಳಿದ್ದಾರೆ.