ಯೋಗ’ ಎಂಬ ಪದವನ್ನು ಕೇಳಿದಾಕ್ಷಣ ಹಲವರ ಮನಸ್ಸಿಗೆ ಮೊದಲು ತೋಚುವುದೇ ಋಷಿ-ಮುನಿಗಳು, ಸಾಧಕರ ಕಲ್ಪನೆ. ಯೋಗ ಎಂದರೆ ಒಂದು ಧರ್ಮಕ್ಕೆ ಸೀಮಿತವಾದದ್ದು ಎನ್ನುವುದರಿಂದ, ಯೋಗ ಎಂದರೆ ಒಂದು ನಿರ್ದಿಷ್ಟ ರಾಷ್ಟ್ರದ ಸ್ವತ್ತು ಎಂಬಲ್ಲಿಂದ, ಇತ್ತೀಚಿಗಷ್ಟೇ ಯೋಗ ಎಂದರೆ ಧರ್ಮಾತೀತ, ಸೀಮಾತೀತ, ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಸಂಬಂಧಿಸಿದ್ದು ಎನ್ನುವ ಅರಿವಾಗಿ ಪ್ರಪಂಚದಾದ್ಯಂತ ಸ್ವೀಕರಿಸಿ, ಅಭ್ಯಸಿಸಲ್ಪಡುತ್ತಿದೆ.
ಯೋಗ’ವೆಂದರೆ ಸಂಯೋಗ, ಅದು ದೇಹ ಮತ್ತು ಮನಸ್ಸಿನ ಸಂಯೋಗ. ಮತ್ತೊಬ್ಬರ ಸಮಸ್ಯೆಯನ್ನು ಅರಿತು ಸ್ಪಂದಿಸುವುದು. ನಮ್ಮ ಬಳಿ ಇರುವ ಅತ್ಯಮೂಲ್ಯ ವಸ್ತುವಿನ ಬಗ್ಗೆ ನಮಗೆ ತಾತ್ಸಾರ. ಆ ವಸ್ತುವನ್ನು ಕಳೆದುಕೊಂಡಾಗ ಮಾತ್ರ ಆ ವಸ್ತುವಿನ ಬೆಲೆ ತಿಳಿಯುವುದು. ನಾವು ಭಾರತೀಯರು ಯೋಗವನ್ನು ಜೀವನದ ಒಂದು ಭಾಗವನ್ನಾಗಿ ಸ್ವೀಕರಿಸಿ, ಪಾಲಿಸಿದರೆ, ಮತ್ತಷ್ಟು ಆರೋಗ್ಯವಾಗಿ, ಸ್ವಸ್ಥ ಭಾರತವನ್ನು ಕಾಣಬಹುದು.
ದೇಹ ಮತ್ತು ಮನಸ್ಸಿನ ಸಂಯೋಗ, ಯಾವುದೇ ಕೆಲಸವನ್ನು ಸಂಪೂರ್ಣ ಮನಸ್ಸಿನಿಂದ, ಅತ್ಯುತಮವಾದ ರೀತಿಯಲ್ಲಿ ಮಾಡಲು ಶಕ್ಯರಾದರೇ ಅದುವೇ ಯೋಗ. ಆಹಾರವನ್ನು ಸರಿಯಾದ ವಿಧಾನದಲ್ಲಿ, ಸಂಪೂರ್ಣ ಮನಸ್ಸಿನಿಂದ ಸೇವಿಸುವುದು ಯೋಗ. ಸತ್ಯವನ್ನೇ ಮಾತನಾಡುವುದು ಯೋಗ. ಮಾತನಾಡುವಾಗ ಬಳಸುವ ಪದಗಳ ಮೇಲೆ ಹಿಡಿತ ಸಾಧಿಸುವುದು ಯೋಗ. ಹೀಗೆ ನಿಧಾನವಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಖಕರವಾದ ಜೀವನ ನಮ್ಮದಾಗುತ್ತದೆ.