ನವದೆಹಲಿ: ಪೆಟ್ರೋಲ್ ಗೆ ಪರ್ಯಾಯ ಇಂಧನವಾಗಿ ಇಥನಾಲ್ ಬಳಸಬಹುದಾಗಿದ್ದು, ಇಥನಾಲ್ ಇಂಜಿನ್ ಗಳನ್ನು ತಯಾರಿಸಲು ಶೀಘ್ರವೇ ಆಟೋಮೋಬೈಲ್ ಕಂಪನಿಗಳಿಗೆ ಸೂಚಿಸಲಾಗುವುದೆಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಘಡ್ಕರಿ ಹೇಳಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ ನಿಜ. ಇದು ಸರ್ಕಾರದ ಗಮನದಲ್ಲಿದೆ. ಆದರೆ ಇಂಧನ ಬೆಲೆ ಜಾಗತಿಕ ಮಟ್ಟದಲ್ಲಿ ನಿರ್ಧಾರವಾಗುತ್ತಿರುವುದರಿಂದ ಬೆಲೆ ಇಳಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಪೆಟ್ರೋಲ್ ಗೆ ಪರ್ಯಾಯ ಇಂಧನವನ್ನು ನಾವೇ ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಫ್ಲೆಕ್ಸ್ ಪ್ಯುಎಲ್ ಇಂಜಿನ್ ತಯಾರಿಸುವ ಬಗ್ಗೆ ಅತಿ ದೊಡ್ಡ ನಿರ್ಧಾರವನ್ನು ಕೇಂದ್ರ ಪ್ರಕಟಿಸಲಿದೆ. ಈ ಇಂಧನ ಅಟೋಮೊಬೈಲ್ ಉದ್ಯಮಕ್ಕೆ ಅನಿವಾರ್ಯ ಎನ್ನಲಾಗಿದೆ. ಪ್ಲೆಕ್ಸ್ ಫ್ಯೂವೆಲ್ ಎಂದರೆ ಫ್ಲೆಕ್ಸಿಬಲ್ ಇಂಧನ ಎಂದರ್ಥ. ಈ ಇಂಧನ ಪ್ರತಿ ಲೀಟರ್ ಗೆ 60-62 ರೂ ಗೆ ಸಿಗಲಿದೆ. ಹಾಗಾಗಿ ಇದರಿಂದ ಪ್ರತಿ ಲೀಟರ್ ಮೇಲೆ 30-35 ರೂಪಾಯಿ ಉಳಿತಾಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.