ಅಪ್ಪ ಎಂಬ ದೈವತ್ವದ ಸಾಕಾರ ಮೂರ್ತಿಯನ್ನು ಹಿಡಿಯಷ್ಟಾದರೂ ಅರ್ಥಮಾಡಿಕೊಳ್ಳಬೇಕೆಂಬ ಪ್ರಯತ್ನಗಳೆಲ್ಲ ಲೆಕ್ಕವಿಲ್ಲದಷ್ಟು ಬಾರಿ ವಿಫಲವಾಗಿದೆ. ಆಗೆಲ್ಲ ಈ ಅಪ್ಪ ಎಂಬ ವ್ಯಕ್ತಿತ್ವದ ಗಹನತೆ ನಮ್ಮ ವಿವೇಚನಕ್ಕೆ ದಕ್ಕುವಂಥದಲ್ಲ ಎಂದು ಸುಮ್ಮನಾಗಿದ್ದೆ. ಆದ್ರೆ ಅಪ್ಪನ ಮಹತ್ವ ಗೊತ್ತಾಗಿದ್ದು ನಾ ಅಪ್ಪನಾದಾಗ. ತನ್ನ ಮಗುವಿನ ಬಾಯಲ್ಲಿ ‘ಪಪ್ಪಾ’ ಎಂದು ಕರೆಸಿಕೊಂಡಾಗ….
ಅಪ್ಪ ಅಂದ್ರೆ ಯಾರು? ನಮ್ಮ ಬದುಕಿನಲ್ಲಿ ಅಪ್ಪತನದ ಪಾತ್ರವೇನು ಎಂಬುದನ್ನು ಯೋಚಿಸುವುದಕ್ಕೆ ಮತ್ತೊಮ್ಮೆ ಸಮಯಬಂದಿದೆ.
ಅದೇನೋ ಗೊತ್ತಿಲ್ಲ, ಈ ಅಪ್ಪ ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಕಣ್ಣಲ್ಲಿ ಹೀರೋ ಆಗಿಯೇ ಉಳಿದುಬಿಟ್ಟಿದ್ದಾನೆ! ಬದುಕಿನ ಪಯಣದ ಲೆಕ್ಕವಿಲ್ಲದಷ್ತು ತಿರುವಿನಲ್ಲಿ ಸಿಕ್ಕ ಸಾವಿರಾರು ಜನರೂ ಅಪ್ಪನ ಸಮಕ್ಕೆ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಬದುಕನ್ನು ಅಪ್ಪ ಆವರಿಸಿಬಿಟ್ಟಿದ್ದಾನೆ! ಅದರಲ್ಲೂ ಹೆಣ್ಮಕ್ಳಿಗಂತೂ ಅಪ್ಪನೇ ಮೊದಲ ಹೀರೋ. ಆತ ಜೊತೆಗಿದ್ರೆ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸ. ಯಾಕೆಂದ್ರೆ ಅಪ್ಪನೆಂಬ ನಂಬಿಕೆಯೇ ಅಂತದ್ದು.
ಮಕ್ಕಳಿಗೆ ತಾಯಿಯೇ ಮೊದಲ ದೇವರು. ಆಕೆ ಒಂಬತ್ತು ತಿಂಗಳು ಹೊತ್ತದ್ದು, ಹೆತ್ತದ್ದು ಸರಿಯಾಗಿ ನೆನಪಿರುತ್ತೆ. ಆದರೆ ಅತ್ತ ಹೊರದೇ, ಹಡಿಯದೇ ದಿನಾ ಸತ್ತ ಅಪ್ಪನ ಕಷ್ಟ, ಆತನ ತ್ಯಾಗ ಅರ್ಥಮಾಡಿಕೊಳ್ಳುವಾಗ ಅಪ್ಪ ನಮ್ಮನ್ನು ಬಿಟ್ಟು ಅದೆಷ್ಟೋ ದೂರ ಕ್ರಮಿಸಿಯಾಗಿರುತ್ತದೆ. ಮತ್ತೆ ನಮಗೆ ಸಿಗುವುದು ಆತ ಬಿಟ್ಟು ಹೋದ ನೆನಪುಗಳು ಮಾತ್ರ.
ಅಪ್ಪನನ್ನು ಬಲ್ಲವರು ಆಕಾಶಕ್ಕೆ ಹೋಲಿಸಿದರು. ಆದರೆ ಅಪ್ಪ ಅದರಾಚೆಗೂ ಮೀರಿ ಬೆಳೆದಿದ್ದು ನಮಗೆ ಗೊತ್ತೆ ಆಗಲ್ಲ. ತಾನು ಸರಿಯಾಗಿ ಉಣ್ಣದೇ, ಬೆಚ್ಚಗೆ ಮಲಗದೇ, ತನಗಾಗಿ ಏನೊಂದನ್ನೂ ಬಯಸದೇ ಸದಾ ತನ್ನವರಿಗಾಗಿ ಪಡುವ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಹಲವು ವರ್ಷಗಳೇ ಬೇಕಾಯಿತು.
ಅಮ್ಮ ವಿಶ್ವಾಸವಾದರೆ ಅಪ್ಪ ನಂಬಿಕೆ. ಇದೇ ನಂಬಿಕೆಯೇ ಅಪ್ಪನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿರುವುದು. ಹುಟ್ಟಿದಾಗಿನಿಂದ ಉಜ್ವಲ ಭವಿಷ್ಯವನ್ನು ತನ್ನ ಮಕ್ಕಳಿಗೆ ಕೊಡಬೇಕೆಂದು ದಿನಂಪ್ರತಿ ಆಲೋಚಿಸುತ್ತಾ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಪ್ರೀತಿಯನ್ನು ಮಾತ್ರ ಉಣಬಡಿಸುತ್ತಾನೆ.
ಒಟ್ಟಾರೆ ಅಪ್ಪ ಎಂಬ ಎರಡಕ್ಷರದ ಗಾಂಭೀರ್ಯದ ಪದದೊಳಗೆ ಅಷ್ಟೇ ಮೆದುವಾದ ನವನೀತವನ್ನು ಹುದುಗಿಸಿರುವುದನ್ನು ಅರ್ಥಮಾಡಿಕೊಳ್ಳಲು ಅಪ್ಪನ ಸ್ಥಾನ ಅಲಂಕರಿಸಿದಾಗಲೇ ಸಾಧ್ಯ.
ದರ್ಪ, ಕೋಪ, ಮುನಿಸು ಜತೆಗೆ ಅಳೆಯಲಾಗದಷ್ಟು ಪ್ರೀತಿ ತುಂಬಿದ ಆ ಜೀವಕ್ಕೆ ಹ್ಯಾಟ್ಸಾಪ್…. ಐ ಲವ್ ಯು ಪಾ……
ಪ್ರಸಾದ್ ಕೋಲ್ಚಾರ್