ಮೈಸೂರು: ನಾನು ಮುಖ್ಯಮಂತ್ರಿಯಾದರೆ ಭೂಗಳ್ಳರು, ಖನಿಜ ಕಳ್ಳರನ್ನು ಜೈಲಿಗಟ್ಟಿ, ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುತ್ತೇನೆ. ನನಗೆ 5 ವರ್ಷಗಳ ಕಾಲಾವಕಾಶ ಬೇಕಿಲ್ಲ, ಕೇವಲ 5 ತಿಂಗಳು ಅವಕಾಶ ಕೊಟ್ಟರೆ ಸಾಕು ಎಂದು ಮಾಜಿ ಶಾಸಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ಮೈಸೂರಿನಲ್ಲಿ ಭೂ ಮಾಫಿಯಾ ವಿರುದ್ಧ ಪ್ರತಿಭಟನೆ ನಡೆಸಿದ ಅವರು, ಮೂಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ವಿರುದ್ಧವೂ ಭೂ ಹಗರಣ ಆರೋಪ ಕೇಳಿಬಂದಿದೆ. ಹೀಗಾಗಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಅಕ್ರಮಗಳನ್ನು ತಡೆಗಟ್ಟುವ ಮನಸ್ಸಿದ್ದರೆ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬೇಕಿಲ್ಲ. ಕೇವಲ 5 ತಿಂಗಳು ಸಾಕು. ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ ಕೇವಲ ಪ್ರಾಮಾಣಿಕರಿಗಷ್ಟೇ ಸಚಿವ ಸಂಪುಟದಲ್ಲಿ ಸ್ಥಾನ ನೀಡುತ್ತೇನೆ. ಬಸವಣ್ಣನ ತತ್ವ, ಆದರ್ಶ ಪಾಲಿಸುವವರನ್ನು ಮಾತ್ರ ಸೇರಿಸಿಕೊಳ್ಳುತ್ತೇನೆ. ಮೊದಲನೆಯದಾಗಿ ಒತ್ತುವರಿ ತೆರವುಗೊಳಿಸಿ, ಖನಿಜಕಳ್ಳರು, ಭೂಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜೈಲಿಗಟ್ಟುತ್ತೇನೆ ಎಂದು ಹೇಳಿದರು.