ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ವಿಚಾರದಲ್ಲಿ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೀವ್ರ ದಾಳಿ ನಡೆಸಿದ್ದಾರೆ. “ಪ್ರಧಾನಿ ಮೋದಿ ಹೇಡಿಯಂತೆ ವರ್ತಿಸಿದ್ದಾರೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ಸರ್ಕಾರದ ಪ್ರಶ್ನೆಗಳನ್ನು ಕೇಳುತ್ತಿರುವ ಕಾಂಗ್ರೆಸ್‌ನ “ಜಿಮ್ಮೆದಾರ್ ಕೌನ್ (ಯಾರು ಜವಾಬ್ದಾರರು)” ಅಭಿಯಾನದ ಭಾಗವಾಗಿ, ಪ್ರಿಯಾಂಕ ಗಾಂಧಿ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿರ್ವಹಣೆಯಲ್ಲಿ “ಆಡಳಿತದಲ್ಲಿ ಅಸಮರ್ಥತೆ”ಯನ್ನು ತೋರಿದೆ ಎಂದು ಬೊಟ್ಟು ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಭಾರತದ ಪ್ರಧಾನಿ ಹೇಡಿಗಳಂತೆ ವರ್ತಿಸಿದ್ದಾರೆ. ಮೋದಿ ನಮ್ಮ ದೇಶವನ್ನು ನಿರಾಸೆಗೊಳಿಸಿದ್ದಾರೆ. ಪ್ರಧಾನಿ ಮೋದಿ ಭಾರತೀಯರು ಮೊದಲಲ್ಲಿ ಬರುವುದಿಲ್ಲ. ಮೋದಿ ಬರೀ ರಾಜಕೀಯ ಮಾಡುತ್ತಾರೆ. ಸತ್ಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮೋದಿ ವರ್ತಿಸುತ್ತಾರೆ. ಬರೀ ಪ್ರಚಾರ ಮಾಡುತ್ತಾರೆ” ಎಂದು ದೂರಿದ್ದಾರೆ. ಹಾಗೆಯೇ “ಈಗ ನಾವು ಪ್ರಧಾನಿ ಮೋದಿಯನ್ನು ಪ್ರಶ್ನಿಸುವ ಸಮಯ ಬಂದಿದೆ, ಇದಕ್ಕೆ ಯಾರು ಜವಾಬ್ದಾರರು?” ಎಂದು ಪ್ರಶ್ನಿಸಿದ್ದಾರೆ.
“ಮೋದಿ ಸರ್ಕಾರವು ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಈವರೆಗೂ ಸರಿಯಾಗಿ ಪರಿಸ್ಥಿತಿ ನಿಭಾಯಿಸಿಲ್ಲ. ಸರ್ಕಾರ ಬರೀ ಸತ್ಯವನ್ನು ಮರೆಮಾಡಲು ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನವನ್ನು ಮಾತ್ರ ಮಾಡಿದೆ” ಎಂದು ಆರೋಪಿಸಿದ್ದಾರೆ.